ಕುಸ್ತಿಪಟುಗಳ ಪ್ರತಿಭಟನೆಯನ್ನು ಕೇಂದ್ರ ಸಂವೇದನೆಯಿಂದ ನಿಭಾಯಿಸುತ್ತಿದೆ: ಸಚಿವ ಅನುರಾಗ್ ಠಾಕೂರ್‌

Update: 2023-06-01 16:05 GMT

ಮುಂಬೈ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕಾಗಿ ಆಗ್ರಹಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕೇಂದ್ರ ಸರಕಾರವು ಸೂಕ್ಷ್ಮ ಸಂವೇದನೆಯೊಂದಿಗೆ ನಿಭಾಯಿಸುತ್ತಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗುರುವಾರ ತಿಳಿಸಿದ್ದಾರೆ.

ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದದ ಆರೋಪಗಳ ಬಗ್ಗೆ ತನಿಖೆಗೆ ಸಮಿತಿಯೊಂದನ್ನು ರಚಿಸಬೇಕೆಂಬ ಕುಸ್ತಿಪಟುಗಳ ಬೇಡಿಕೆಗೆ ಕೇಂದ್ರ ಸರಕಾರ ಸಮ್ಮತಿಸಿದ್ದು, ತನಿಖೆ ನಡೆಯುತ್ತಿದೆ ಎಂದರು.

‘‘ಕೇಂದ್ರ ಸಕಾರವು ಕುಸ್ತಿಪಟುಗಳ ಪ್ರತಿಭಟನೆಯನ್ನು ಸಂವೇದನೆಯೊಂದಿಗೆ ನಿಬಾಯಿಸುತ್ತಿದೆ. ಕುಸ್ತಿಪಟುಗಳ ಬೇಡಿಕೆಯಂತೆ ಬ್ರಿಜ್ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ಕುಸ್ತಿ ಫೆಡರೇಶನ್ನ ಪದಾಧಿಕಾರಿಗಳು ಕಾರ್ಯನಿರ್ವಹಿಸುವುದಕ್ಕೆ ಅನುಮತಿ ನೀಡಬಾರದೆಂದು ಕುಸ್ತಿಪಟುಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ ಡಬ್ಲುಎಫ್ಐಗೆ ಆಡಳಿತಗಾರರ ಸಮಿತಿಯೊಂದನ್ನು ರಚಿಸಲಾಗಿದೆ’’ ಎಂದು ಠಾಕೂರ್ ಹೇಳಿದರು.

ಕ್ರೀಡೆಯನ್ನು ದುರ್ಬಲಗೊಳಿಸುವಂತಹ ಅಥವಾ ಆಟಗಾರರಿಗೆ ಧಕ್ಕೆಯುಂಟು ಮಾಡುವಂತಹ ಯಾವುದೇ ಹೆಜ್ಜೆಯನ್ನು ಇರಿಸದಂತೆ ಸಚಿವ ಠಾಕೂರ್ ಅವರು ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಮನವಿ ಮಾಡಿದರು. ಕುಸ್ತಿಪಟುಗಳು ಮಾಡಿರುವ ಆರೋಪಗಳ ಕುರಿತಾದ ತನಿಖೆೆ ಪೂರ್ಣಗೊಂಡಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ತಾಳ್ಮೆಯನ್ನು ವಹಿಸುವಂತೆ ಹಾಗೂ ಸುಪ್ರೀಂಕೋರ್ಟ್ ಬಗ್ಗೆ ನಂಬಿಕೆ ಇರಿಸುವಂತೆಯೂ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳಿಗೆ ಮನವಿ ಮಾಡಿದರು.

Similar News