ಜೂನ್ 12ರಂದು ಪ್ರತಿಪಕ್ಷಗಳ ಸಭೆ: 16 ಪಕ್ಷಗಳು ಭಾಗವಹಿಸುವುದಾಗಿ ಭರವಸೆ

Update: 2023-06-01 18:20 GMT

ಹೊಸದಿಲ್ಲಿ, ಜೂ. 1: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಚುನಾವಣಾ ತಂತ್ರಗಾರಿಕೆ ರೂಪಿಸುವ ಕುರಿತು ಚರ್ಚೆ ನಡೆಸಲು  ಆಯೋಜಿಸಲಾದ ಮೊದಲ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸುವುದಾಗಿ 16 ಪ್ರತಿಪಕ್ಷಗಳು ಭರವಸೆ ನೀಡಿವೆ.  

ಜನತಾ ದಳ (ಸಂಯುಕ್ತ)ದ ನಾಯಕ ಹಾಗೂ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೂನ್ 12ರಂದು ಆಯೋಜಿಸಿರುವ ಪ್ರತಿಪಕ್ಷಗಳ ಸಭೆಯಲ್ಲಿ ವೇಳಾಪಟ್ಟಿ ಸಮಸ್ಯೆಯಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. 

ಸಭೆಯನ್ನು ಜೂನ್ 23ಕ್ಕೆ ಮುಂದೂಡಬೇಕೆಂದು ಕಾಂಗ್ರೆಸ್ ಬಯಸಿದೆ. ಆದರೆ, ಎಲ್ಲರಿಗೂ ಅನುಕೂಲವಾಗುವ ದಿನಾಂಕ ಸಿಗುವುದು ಕಷ್ಟಕರ. ಆದುದರಿಂದ  ಅಂತಿಮಗೊಳಿಸಲಾದ ವೇಳಾಪಟ್ಟಿಯಂತೆ ಸಭೆ ನಡೆಯಲಿದೆ. 

ಸಭೆಯಲ್ಲಿ ಭಾಗವಹಿಸಲು ತನ್ನ ಓರ್ವ ನಾಯಕನನ್ನು ನಿಯೋಜಿಸಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ. ‘‘ಪ್ರತಿಪಕ್ಷಗಳು ಸಂಘಟಿತರಾಗುವ ಕುರಿತು ಕಾಂಗ್ರೆಸ್ಗೆ ಕಾಳಜಿ ಇದೆ ಎಂಬುದನ್ನು ತೋರಿಸಲು ಬಯಸುವುದಾದರೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಓರ್ವ ಮುಖ್ಯಮಂತ್ರಿಯನ್ನು ನಿಯೋಜಿಸಬೇಕು’’ ಎಂದು ಪ್ರತಿಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 

ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ)ಯ ಹಿರಿಯ ನಾಯಕ ಶರದ್ ಪವಾರ್ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

Similar News