ಸಾವಿತ್ರಿ ಭಾ ಪುಲೆ ಬಗ್ಗೆ ಆಕ್ಷೇಪಾರ್ಹ ಲೇಖನ ಪ್ರಕಟ: ಎರಡು ವೆಬ್‌ಸೈಟ್‌ಗಳ ವಿರುದ್ಧ ಎಫ್ಐಆರ್ ದಾಖಲು

Update: 2023-06-01 18:15 GMT

ಮುಂಬೈ, ಜೂ. 1: ಹತ್ತೊಂಬತ್ತನೇ ಶತಮಾನದ ಸಮಾಜ ಸುಧಾರಕಿ ಸಾವಿತ್ರಿ ಭಾ ಪುಲೆ ಕುರಿತು ಆಕ್ಷೇಪಾರ್ಹ ಲೇಖನ ಪ್ರಕಟಿಸಿದ ಆರೋಪದಲ್ಲಿ ಎರಡು ವೆಬ್ಸೈಟ್ಗಳ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

‘ಇಂಡಿಕ್ ಟೇಲ್ಸ್’ ಹಾಗೂ ‘ಹಿಂದೂ ಪೋಸ್ಟ್’ ವಿರುದ್ಧ ಬುಧವಾರ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಾವಿತ್ರಿ ಭಾ ಪುಲೆ ಅವರ ಬಗ್ಗೆ ಆಕ್ಷೇಪಾರ್ಹ ಲೇಖನ ಪ್ರಕಟಿಸಿದ ಎರಡು ವೆಬ್ಸೈಟ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಅಜಿತ್ ಪವಾರ್, ಜಯಂತ್ ಪಾಟಿಲ್, ಸುನೀಲ್ ತಟ್ಕೆರೆ ಹಾಗೂ ಛಗನ್ ಭುಜ್ಬಲ್ ಸೇರಿದಂತೆ ಎನ್ಸಿಪಿ ನಾಯಕರು ಪಕ್ಷದ ಕಾರ್ಯಕರ್ತರೊಂದಿಗೆ ಮುಂಬೈ ಪೊಲೀಸ್ ಆಯುಕ್ತರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ್ದರು. 

ಅನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಲೇಖನವನ್ನು ಪರಿಶೀಲಿಸುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

Similar News