ಖಾಪ್ ಮಹಾ ಪಂಚಾಯತ್: ನ್ಯಾಯ ಕೋರಲು ರಾಷ್ಟ್ರಪತಿ ಭೇಟಿಗೆ ನಿರ್ಧಾರ

Update: 2023-06-01 18:16 GMT

ಹೊಸದಿಲ್ಲಿ, ಜೂ. 1: ಉತ್ತರಪ್ರದೇಶ ಮುಝ್ಝಪ್ಫರ್ನಗರದಲ್ಲಿ ಗುರುವಾರ ‘ಮಹಾಪಂಚಾಯತ್’ ನಡೆದಿದ್ದು, ಭಾರತೀಯ ಕುಸ್ತಿ ಫೆಡರೇಶನ್ನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವಂತೆ ಕೋರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ನಿರ್ಧರಿಸಲಾಗಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

‘‘ನಾವು ರಾಷ್ಟ್ರಪತಿ ಹಾಗೂ ಸರಕಾರವನ್ನು ಭೇಟಿಯಾಗಲಿದ್ದೇವೆ. ಒಂದು ವೇಳೆ ಅವರು ಯಾವುದೇ ನಿರ್ಧಾರ (ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ)ತೆಗೆದುಕೊಳ್ಳದೇ ಇದ್ದರೆ, ನಾವು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ’’ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. 
‘‘ಖಾಪ್ ಪಂಚಾಯತ್ ಹಾಗೂ ಈ ಹೆಣ್ಮಕ್ಕಳು (ಕುಸ್ತಿಪಟುಗಳು) ಸೋಲುವುದಿಲ್ಲ. ನಾವು ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’’ ಎಂದು ಅವರು ಹೇಳಿದ್ದಾರೆ. 
ಖಾಪ್ಗಳು ಕುರುಕ್ಷೇತ್ರದಲ್ಲಿ ಶುಕ್ರವಾರ ಇನ್ನೊಂದು ಸಭೆ ನಡೆಸಲಿವೆ. ಅಲ್ಲಿ ಇನ್ನೂ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಟಿಕಾಯತ್ ತಿಳಿಸಿದ್ದಾರೆ. ‘‘ಕುಸ್ತಿಪಟುಗಳಿಗೆ ಬೆಂಬಲ ನೀಡಲು ಖಾಪ್ಗಳ ಪ್ರತಿನಿಧಿಗಳು ರಾಷ್ಟ್ರಪತಿ ಹಾಗೂ ಸರಕಾರವನ್ನು ಬೇಟಿಯಾಗಲಿದ್ದಾರೆ. ಅವರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ’’ ಎಂದು ಅವರು ಹೇಳಿದ್ದಾರೆ. 

ಖಾಪ್ ಮಹಾಪಂಚಾಯತ್ನಲ್ಲಿ ಪಂಜಾಬ್, ಹರ್ಯಾಣ, ರಾಜಸ್ಥಾನ ಹಾಗೂ ದಿಲ್ಲಿಯ ಖಾಪ್ ನಾಯಕರು ಭಾಗವಹಿಸಿದ್ದಾರೆ. 
ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಅಲ್ಲದೆ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಕೂಡ ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ. ಭಾರತೀಯ ಕುಸ್ತಿಪಟುಗಳ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ರಕ್ಷಿಸಲು ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ಎಸ್ಕೆಎಂ ಕರೆ ನೀಡಿತ್ತು. ಅಲ್ಲದೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಕೂಡ ಅದು ಆಗ್ರಹಿಸಿತ್ತು. 

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬೆಂಬಲಿಸಿ ಅಯೋಧ್ಯೆಯಲ್ಲಿ ಜೂನ್ 5ರಂದು ರ್ಯಾಲಿ ನಡೆಸಲು ಸಾಧುಗಳ ಗುಂಪೊಂದು ನಿರ್ಧರಿಸಿದೆ. ಅದೇ ದಿನ ಪ್ರತಿಭಟನೆ ನಡೆಸಲು ಹಾಗೂ ಬ್ರಿಜ್ ಭೂಷಣ್ ಶರಣ್ ಸಿಂಗ್ನ ಪ್ರತಿಕೃತಿ ದಹಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ.
ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ನನ್ನು ಬಂಧಿಸುವಂತೆ ಆಗ್ರಹಿಸಿ ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಹಾಗೂ ಎರಡು ಬಾರಿ ವಿಶ್ವ ಚಾಂಪಿಯನ್ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳು ದಿಲ್ಲಿಯ ಜಂತರ್ ಮಂತರ್ನಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿಭಟನ ನಡೆಸುತ್ತಿದ್ದರು. ಆದರೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಈಗ  ಕುಸ್ತಿಪಟುಗಳು  ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

Similar News