ಜುನೈದ್‌, ನಾಸಿರ್‌ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದರೂ, ವಾಹನದಲ್ಲಿ ದನಗಳಿರಲಿಲ್ಲವೆಂದು ವಾಪಸ್‌ ಕಳುಹಿಸಿದ್ದ ಪೊಲೀಸರು

ಭಿವಾನಿ ಯುವಕರ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

Update: 2023-06-02 07:28 GMT

ಜೈಪುರ್‌: ರಾಜಸ್ಥಾನದ ಭರತಪುರದ ಇಬ್ಬರು ಯುವಕರಾದ ಜುನೈದ್‌ ಮತ್ತು ನಾಸಿರ್ ಹರ್ಯಾಣಾದ ಭಿವಾನಿಯಲ್ಲಿ ವಾಹನವೊಂದರೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಚಾರ್ಚ್‌ಶೀಟ್‌ ಸಲ್ಲಿಸಿದ್ದಾರೆ.

ಜುನೈದ್‌ ಮತ್ತು ನಾಸಿರ್‌ ಅವರನ್ನು ಗೋರಕ್ಷಕರು ಗಂಭೀರವಾಗಿ ಹಲ್ಲೆಗೈದು ನಂತರ ಅವರನ್ನು ಹರ್ಯಾಣಾದ ಪೊಲೀಸ್‌ ಠಾಣೆಗೆ ಕರೆದೊಯ್ದರೂ, ದನಗಳಿರಲಿಲ್ಲ ಎಂಬ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು ವಾಪಸ್‌ ಕಳುಹಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಈ ಘಟನೆ ಫೆಬ್ರವರಿಯಲ್ಲಿ ನಡೆದಿದ್ದರೆ ಮೇ 16ರಂದು ರಾಜಸ್ಥಾನ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ ಎಂದು thequint.com ವರದಿ ಮಾಡಿದೆ.

ಚಾರ್ಜ್‌ಶೀಟ್‌ನಲ್ಲಿ ಬಜರಂಗದಳದ ಮೋನು ಮನೇಸರ್‌ ಸೇರಿದಂತೆ 27 ಮಂದಿಯನ್ನು ಶಂಕಿತರು ಎಂದು ಹೆಸರಿಸಲಾಗಿದೆ.

ಬಂಧಿತ ಆರೋಪಿ ರಿಂಕುವಿನ ವಾಟ್ಸ್ಯಾಪ್‌ ವಿವರಗಳು ಹಾಗೂ ಮೊಬೈಲ್‌ ಮಾಹಿತಿ ವಿವರಗಳು ಹಾಗೂ ಸಿಡಿಆರ್‌ ವಿಶ್ಲೇಷಣೆಯಿಂದ ಆತನಿಗೆ ನಾಸಿರ್‌ ಮತ್ತು ಜುನೈದ್‌ ಅವರ ಬೊಲೆರೋ ಹೋಗುತ್ತಿದ್ದ ಮಾರ್ಗದ ಬಗ್ಗೆ ಮಾಹಿತಿಯಿತ್ತು ಹಾಗೂ ರಿಂಕು ನಂಟು ಹೊಂದಿದ್ದ ಗೋರಕ್ಷಕರ ತಂಡವು ಈ ವಾಹನವನ್ನು ಅಡ್ಡಗಟ್ಟಿತ್ತು ಎಂದು ಚಾರ್ಜ್‌ಶೀಟ್‌ ಹೇಳಿದೆ.

ಗೋರಕ್ಷಕರು ಪಿರುಕ ಗ್ರಾಮದಲ್ಲಿ ವಾಹನ ತಡೆದು ನಿಲ್ಲಿಸಿ ದನಗಳನ್ನು ನೋಡಬೇಕೆಂದು ಹೇಳಿದ್ದರು ಆದರೆ ವಾಹನದಲ್ಲಿ ದನಗಳಿರಲಿಲ್ಲ, ಆದರೂ ಗೋಗಿ, ಮೋನು ರಾನಾ, ವಿಕಾಸ್‌ ಆರ್ಯ, ವಿಶಾಲ್‌ ಜವ್ಲಿ, ಕಾಲು ಕೈತಾಲ್‌, ಶಶಿಕಾಂತ್‌, ಶಿವಂ, ಕಿಶೋರ್‌, ಬದಲ್‌ ಪಿಂಗವನ್‌ ಇತರರು ನಾಸಿರ್‌ ಮತ್ತು ಜುನೈದ್‌ ಮೇಲೆ ತೀವ್ರ ಹಲ್ಲೆಗೈದು ನಂತರ ಈ ಕೃತ್ಯವನ್ನುಯೋಜಿಸಿದ್ದ ರಿಂಕು ಸೈನಿ ಜೊತೆ ಮಾತನಾಡಿದ್ದರು ಎಂದು ಚಾರ್ಜ್‌ ಶೀಟ್‌ ಹೇಳಿದೆ.

ನಂತರ ಅವರಿಬ್ಬರನ್ನು ಮುಂಡ್ಕ ಗಡಿ ತನಕ ಕರೆತಂದಾಗ ಅಲ್ಲಿದ್ದ ರಿಂಕು ಅವರನ್ನು ದನಗಳ ಬಗ್ಗೆ ಪ್ರಶ್ನಿಸಿದ್ದ. ಆದರೆ ದನಗಳಿಲ್ಲದೇ ಇರುವುದನ್ನು ಕಂಡು ಆತ ಕೂಡ ಅವರಿಗೆ ಹಲ್ಲೆಗೈದಿದ್ದ. ನಂತರ ಫಿರೋಝಪುರ್‌ ಝಿರ್ಕ ಠಾಣೆಗೆ ಕರೆದೊಯ್ದಾಗ  ದನಗಳಿರಲಿಲ್ಲ ಎಂಬ ಕಾರಣಕ್ಕೆ ಹಾಗೂ ಘಟನೆ ಹರ್ಯಾಣ ಪೊಲೀಸ್‌ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಕಾರಣಕ್ಕೆ ವಾಪಸ್‌ ಕಳುಹಿಸಿದ್ದರು ಎಂದು ಚಾರ್ಚ್‌ಶೀಟ್‌ ಹೇಳಿದೆ.

ಜುನೈದ್‌ ಮತ್ತು ನಾಸಿರ್‌ ಅವರ ಮೂಳೆಗಳ ಡಿಎನ್‌ಎ ಮಾದರಿಗಳ ಆಧಾರದಲ್ಲಿ ವಿಧಿವಿಜ್ಞಾನ ಪರೀಕ್ಷೆಯ ವರದಿಯಲ್ಲಿ, ಅಪಹರಣಕ್ಕೆ ಬಳಸಲಾದ ಸ್ಕಾರ್ಪಿಯೋ ವಾಹನದಲ್ಲಿ ಪತ್ತೆಯಾದ ರಕ್ತದ ಕಲೆಗಳು ಸಂತ್ರಸ್ತರ ಸಂಬಂಧಿಕರ ಡಿಎನ್‌ಎ ಜೊತೆಗೆ ಹೊಂದಾಣಿಕೆಯಾಗಿದ್ದರಿಂದ ಮೃತ ಜುನೈದ್‌ ಮತ್ತು ನಾಸಿರ್‌ ಎಂಬುದು ದೃಢಪಟ್ಟಿತ್ತು ಎಂದು ಚಾರ್ಜ್‌ ಶೀಟ್‌ ಹೇಳಿದೆ.

ಘಟನೆಗೆ ಸಂಬಂಧಿಸಿದ ಆರೋಪಿ ಮೋನು ಮನೇಸರ್‌ನನ್ನು ಬಂಧಿಸಬೇಕೆಂಬುದು ಮೃತರ ಕುಟುಂಬಗಳ ಆಗ್ರಹವಾಗಿದೆ.

Similar News