ಜೂ. 9ರೊಳಗೆ ಬ್ರಿಜ್ ಭೂಷಣ್ ಬಂಧಿಸಿ: ಮೋದಿ ಸರಕಾರಕ್ಕೆ ಖಾಪ್ ಮಹಾಪಂಚಾಯತ್ ಎಚ್ಚರಿಕೆ

Update: 2023-06-02 16:16 GMT

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನನ್ನು ಜೂನ್ 9ರೊಳಗೆ ಬಂಧಿಸಬೇಕು; ಇಲ್ಲದಿದ್ದರೆ ಧರಣಿ ನಿರತ ಕುಸ್ತಿಪಟುಗಳಿಗೆ ಬೆಂಬಲವಾಗಿ ಖಾಪ್ ನಾಯಕರು ದೇಶಾದ್ಯಂತ ಪಂಚಾಯತ್‌ಗಳನ್ನು ನಡೆಸಲಿದ್ದಾರೆ ಎಂದು ರೈತ ನಾಯಕರು ಶುಕ್ರವಾರ ನರೇಂದ್ರ ಮೋದಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ದಿಲ್ಲಿ ಪೊಲೀಸರು ಎಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ 66 ವರ್ಷದ ಬಿಜೆಪಿ ಸಂಸದನ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಬಳಿಕ, ಸಿಂಗ್‌ನನ್ನು ಮೇ 21ರೊಳಗೆ ಬಂಧಿಸುವಂತೆ ಹಲವು ರೈತ ಸಂಘಟನೆಗಳು ಮತ್ತು ಖಾಪ್ ಪಂಚಾಯತ್‌ಗಳು ಸರಕಾರವನ್ನು ಒತ್ತಾಯಿಸಿದ್ದವು.

ಶುಕ್ರವಾರ ಹರ್ಯಾಣದ ಕುರುಕ್ಷೇತ್ರದಲ್ಲಿ ನಡೆದ ಖಾಪ್ ಮಹಾಪಂಚಾಯತೊಂದರಲ್ಲಿ, ಸಿಂಗ್‌ನನ್ನು ಜೂನ್ 9ರೊಳಗೆ ಬಂಧಿಸದಿದ್ದರೆ ಕುಸ್ತಿಪಟುಗಳು ದಿಲ್ಲಿಯ ಜಂತರ್-ಮಂತರ್‌ಗೆ ಮರಳುತ್ತಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಸಿದರು.

ಸಿಂಗ್‌ನನ್ನು ಬಂಧಿಸದಿದ್ದರೆ ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯುವುದಾಗಿ ಸಾಕ್ಷಿ ಮಲಿಕ್, ಬಜರಂಗ್ ಪೂನಿಯ ಮತ್ತು ವಿನೇಶ್ ಫೋಗಟ್ ಘೋಷಿಸಿದ ಮೂರು ದಿನಗಳ ಬಳಿಕ ಕುರುಕ್ಷೇತ್ರದಲ್ಲಿ ಮಹಾಪಂಚಾಯತ್ ನಡೆದಿದೆ. ಕುಸ್ತಿ ಪಟುಗಳು ತಮ್ಮ ಪದಕಗಳನ್ನು ನದಿಗೆ ಎಸೆಯುವುದನ್ನು ರೈತ ನಾಯಕ ಟಿಕಾಯತ್ ತಡೆದಿದ್ದರು. ಐದು ದಿನಗಳಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಅವರು ಕುಸ್ತಿಪಟುಗಳಿಗೆ ನೀಡಿದ್ದರು.

Similar News