ಒಡಿಶಾದಲ್ಲಿ ರೈಲು ಅಪಘಾತ: 50 ಮಂದಿ ಮೃತ್ಯು; 300ಕ್ಕೇರಿದ ಗಾಯಾಳುಗಳ ಸಂಖ್ಯೆ

Update: 2023-06-02 17:11 GMT

ಒಡಿಶಾ: ಬಾಲಸೋರ್ ಜಿಲ್ಲೆಯಲ್ಲಿ ಪ್ಯಾಸೆಂಜರ್ ರೈಲು ಹಳಿತಪ್ಪಿ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು 300 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು reuters.com ವರದಿ ಮಾಡಿದೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಸಂತ್ರಸ್ತರಿಗೆ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದಿವೆ. ಇನ್ನೊಂದು ಬದಿಯಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ರೈಲು ಹಳಿತಪ್ಪಿದ ಕೋಚ್‌ಗಳಿಗೆ ಢಿಕ್ಕಿ ಹೊಡೆದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ NDTVಗೆ ತಿಳಿಸಿದ್ದಾರೆ.

ಒಡಿಶಾ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಸುಧಾಂಶು ಸಾರಂಗಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಬಾಲಸೋರ್ ಮತ್ತು ಸುತ್ತಮುತ್ತಲಿನ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ತುರ್ತು ಎಚ್ಚರಿಕೆ ನೀಡಲಾಗಿದೆ.
 
ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (NDRF) ನ ನೂರಕ್ಕೂ ಹೆಚ್ಚು ಸಿಬ್ಬಂದಿ ರೈಲಿನೊಳಗೆ ಸಿಕ್ಕಿಬಿದ್ದ ಪ್ರಯಾಣಿಕರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

Similar News