ಒಡಿಶಾ ರೈಲು ಅಪಘಾತಕ್ಕೆ ಕಾರಣ ತನಿಖೆಯ ನಂತರ ತಿಳಿಯಲಿದೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Update: 2023-06-03 05:10 GMT

ಹೊಸದಿಲ್ಲಿ: ಒಡಿಶಾದ ಬಾಲಸೋರ್‌ನಲ್ಲಿ 238 ಮಂದಿ ಸಾವನ್ನಪ್ಪಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡ ಭೀಕರ ರೈಲು ಅಪಘಾತದ ಘಟನೆಯ ಕುರಿತು ತನಿಖೆ ನಡೆಸಲು ಈಗಾಗಲೇ ಉನ್ನತ ಮಟ್ಟದ ಸಮಿತಿಯನ್ನು ಘೋಷಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw)ಶನಿವಾರ ಹೇಳಿದ್ದಾರೆ.

ರೈಲ್ವೆ ಸುರಕ್ಷತಾ ಆಯುಕ್ತರನ್ನು ಕರೆಸಲಾಗಿದ್ದು, ಅವರಿಂದಲೂ ತನಿಖೆ ನಡೆಸಿ ಅಪಘಾತದ ಮೂಲ ಕಾರಣವನ್ನು ಗುರುತಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಸದ್ಯಕ್ಕೆ ಸರಕಾರದ ದ ಸಂಪೂರ್ಣ ಗಮನವು ರಕ್ಷಣಾ ಕಾರ್ಯಾಚರಣೆ ಹಾಗೂ  ಗಾಯಾಳುಗಳ ಚಿಕಿತ್ಸೆಯ ಮೇಲೆ ಇದೆ ಎಂದು ವೈಷ್ಣವ್ ಹೇಳಿದರು

" ಮೃತರ ಕುಟುಂಬಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ. ರೈಲ್ವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ  ರಾಜ್ಯ ಸರಕಾರದ ತಂಡಗಳು ನಿನ್ನೆ ರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ" ಎಂದು ಸಚಿವರು ಹೇಳಿದರು.

ಪ್ರತಿಪಕ್ಷಗಳು ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಉತ್ತರಿಸಿದ ವೈಷ್ಣವ್, "ಸದ್ಯ ಗಮನವು ರಕ್ಷಣೆ ಹಾಗೂ  ಪರಿಹಾರದ ಮೇಲೆ ಇರಬೇಕು" ಎಂದು ಹೇಳಿದರು.

ನಿರ್ಲಕ್ಷ್ಯ ವಹಿಸಿದ್ದಕ್ಕೆ ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದಾಗ, ಈಗ ಏನನ್ನೂ ಹೇಳಲು ಸಾಧ್ಯವಿಲ್ಲ, ತನಿಖೆ  ಮುಗಿದ ನಂತರವಷ್ಟೇ ತಿಳಿಯಲಿದೆ ಎಂದರು.

Similar News