ಗಂಜಿಮಠ ಪ್ಲಾಸ್ಟಿಕ್ ಪಾರ್ಕ್2 ಹಂತದ ಯೋಜನೆ ಒಂದು ವರ್ಷದೊಳಗೆ ಪೂರ್ಣ: ನಳಿನ್ ಕುಮಾರ್ ಕಟೀಲ್

Update: 2023-06-03 13:56 GMT

ಮಂಗಳೂರು: ಗುರುಪುರ ಗಂಜಿಮಠದಲ್ಲಿ ಸುಮಾರು 6,500 ಕೋಟಿ  ರೂ. ವೆಚ್ಚದಲ್ಲಿ  ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಎರಡನೆ ಹಂತದ ಯೋಜನೆ ಮುಂದಿನ ಒಂದು ವರ್ಷ ದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅವರು ಇಂದು ಗುರುಪುರ ಗಂಜಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಮಗಾರಿ ಯ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭ ತಿಳಿಸಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಉದ್ಯಮಗಳಿಗೆ ಆಧ್ಯತೆ ನೀಡಲು ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ಪ್ರತಿಭೆ ಗಳಿಗೆ ಅವಕಾಶ ನೀಡಲು ಆಗಿನ ಕೇಂದ್ರ ಸಚಿವ ಅನಂತ್ ಕುಮಾರ್ ಗಂಜಿಮಠಕ್ಕೆ ಪ್ಲಾಸ್ಟಿಕ್ ಪಾರ್ಕ್ ಘೋಷಣೆ ಮಾಡಿದ್ದಾರೆ. ಬಳಿಕ ಸಚಿವ ಭಗವಂತ ಖೂಬ ಅವರ ಮೂಲಕ ಕೇಂದ್ರ ಸರಕಾರ ಅನುಮೋದನೆ ನೀಡದೆ. ಬಳಿಕ ಗಂಜಿಮಠದಲ್ಲಿ ಕೆಐಎಡಿಬಿ ಯಿಂದ ಹಸ್ತಾಂತರ ವಾಗಿರುವ  104.28ಎಕರೆ ಪ್ರದೇಶದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಈಗಾಗಲೇ 39ಯೂನಿಟ್ ಗಳು ಇಲ್ಲಿ ಕಾರ್ಯ ನಿರ್ವಹಿಸಲು ಮುಂದೆ ಬಂದಿದೆ. ಸುಮಾರು ಒಂದು ಸಾವಿರ ಜನರಿಗೆ ನೇರ ಉದ್ಯೋಗ ದೊರೆಯಲಿದೆ.10ಸಾವಿರ ಜನರಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ. ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರಕಾರ ದಿಂದ ರೂ.31.38 ಕೋಟಿ ಹಾಗೂ ಕೆಐಎಡಿಬಿಯಿಂದ ರೂ 31.38 ಕೋಟಿ ಸೆರಿ ಒಟ್ಟು ರೂ 62.77 ಕೋಟಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ  ವೆಚ್ಚ ಮಾಡಲಾಗಿದೆ. ಈ ಪಾರ್ಕ್ ನಲ್ಲಿ ಸಿಐಪಿಇಟಿ ತರಬೇತಿ ಕಾಲೇಜು, ಪ್ರತ್ಯೇಕ ಲ್ಯಾಬ್,ವೇರ್ ಹೌಸ್ ನಿರ್ಮಾಣ ಗೊಳ್ಳಲಿದೆ ಮಂಗಳೂರು ತಾಲೂಕಿನ ಕೈಗಾರಿಕಾ ವ್ಯಾಪ್ತಿಗೆ ಒಳಪಡುವ ಗಂಜಿಮಠದ ಪ್ಲಾಸ್ಟಿಕ್ ಪಾರ್ಕ್ ಪ್ರದೇಶದಲ್ಲಿ ರೂ. 16.45 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಒಳಚರಂಡಿ, ನೀರು ಸರಬರಾಜು ಪೈಪ್ ಅಳವಡಿಕೆಗೆ ಸಂಬಂಧಿಸಿದಂತೆ ಎರಡನೆ ಹಂತದ ಕಾಮಗಾರಿ ನವೆಂಬರ್ 25,2022 ರಂದು ಆರಂಭಗೊಂಡಿದೆ. ಈ ವರ್ಷ ಅಕ್ಟೋಬರ್ 24,2023ರಂದು ಪೂರ್ಣ ಗೊಳ್ಳಲಿದೆ. 3561ಚದರ ಅಡಿ ವಿಸ್ತೀರ್ಣದ ಸಿಐಪಿಇಟಿ ಕಾಲೇಜಿನ ಆಡಳಿತ ಕಚೇರಿ, 385 ಚದರ ಅಡಿ ವಿಸ್ತೀರ್ಣದ ಅತಿಥಿ ಗೃಹ,2250 ಚದರ ಅಡಿ ವಿಸ್ತೀರ್ಣದ ಗೋದಾಮ, ಉಪ ಹಾರ ಗೃಹ,ಪುರುಷರ ಮತ್ತು ಮಹಿಳೆಯರ ಹಾಸ್ಟೆಲ್  ಗಂಜಿಮಠದಲ್ಲಿ ರೂ.19.93 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಒಂದು ವರ್ಷ ದಲ್ಲಿ ಪೂರ್ಣ ಗೊಳ್ಳಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಪಾರ್ಕ್ ನಿಂದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸಂಪರ್ಕ ಕಲ್ಪಿಸುವ 0.80  ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ರಸ್ತೆಗೆ ಸಂಬಂಧಿಸಿದಂತೆ ಒಳ ಚರಂಡಿ ಮಳೆಚರಂಡಿ ಕಾಮಗಾರಿಗಳನ್ನುತ್ವರಿತ ವಾಗಿ ಪೂರ್ಣ ಗೊಳಿಸಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಗುರುಪುರ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಯೋಜನೆ ಗೆ ಸಂಬಂಧಿಸಿದಂತೆ ಸ್ಥಳೀಯ ರೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭ ಶಾಸಕ ಡಾ. ಭರತ್ ಶೆಟ್ಟಿ.ಕೆಐಎಡಿಬಿ ಅಧಿಕಾರಿ ಗಣಪತಿ, ಗೋಕುಲ್ ದಾಸ್ ನಾಯಕ್, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೊದಲಾದ ವರು ಉಪಸ್ಥಿತರಿದ್ದರು.

Similar News