ಅತ್ಯಾಚಾರ ಸಂತ್ರಸ್ತೆಗೆ ಕುಜದೋಷವಿದೆಯೇ ಎಂದು ಪರಿಶೀಲಿಸಲು ಜ್ಯೋತಿಷ್ಯ ಇಲಾಖೆಗೆ ಹೈಕೋರ್ಟ್ ಆದೇಶ: ಸುಪ್ರೀಂ ತಡೆ

Update: 2023-06-03 16:50 GMT

ಹೊಸದಿಲ್ಲಿ: ಅತ್ಯಾಚಾರ ಸಂತ್ರಸ್ತೆಯು ಕುಜದೋಷವನ್ನು ಹೊಂದಿದ್ದಾಳೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಜ್ಯೋತಿಷ್ಯ ಇಲಾಖೆಗೆ ನಿರ್ದೇಶಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಮೇ 23ರಂದು ಹೊರಡಿಸಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಶನಿವಾರ ತಡೆ ನೀಡಿದೆ.

ಜ್ಯೋತಿಷ್ಯವು ವೈಜ್ಞಾನಿಕವೇ ಎನ್ನುವುದನ್ನು ಪರಿಶೀಲಿಸುವ ಗೋಜಿಗೆ ತಾನು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ ಮಿತ್ತಲ್ ಅವರ ರಜಾಕಾಲ ಪೀಠವು,ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಇಂತಹ ಆದೇಶವನ್ನು ಹೊರಡಿಸಬಾರದಿತ್ತು ಎಂದು ಬೆಟ್ಟು ಮಾಡಿತು.

‘ಇದು ಸಂಪೂರ್ಣವಾಗಿ ಅಸಾಂದರ್ಭಿಕವಾಗಿದೆ ಮತ್ತು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ಖಗೋಳ ಶಾಸ್ತ್ರವು ಏನು ಮಾಡಬೇಕಿದೆ ಎಂಬ ಬಗ್ಗೆ ನಿಮ್ಮೊಂದಿಗೆ ಚರ್ಚೆಯನ್ನು ನಾವು ಬಯಸಿಲ್ಲ. ವಿಷಯವನ್ನು ಇದಕ್ಕೆ ತಳುಕು ಹಾಕಿದ್ದಕ್ಕೆ ಮಾತ್ರ ನಮಗೆ ಕಳವಳವಿದೆ ’ಎಂದು ನ್ಯಾ.ಧುಲಿಯಾ ಹೇಳಿದರೆ,‘ಯಾವ ಉದ್ದೇಶದಿಂದ ಈ ಜ್ಯೋತಿಷ್ಯ ವರದಿಯನ್ನು ಕೋರಲಾಗಿದೆ ಎನ್ನುವುದು ನಮಗೆ ಅರ್ಥವಾಗಿಲ್ಲ ’ ಎಂದು ನ್ಯಾ.ಮಿತ್ತಲ್ ನುಡಿದರು.

ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಜ್ಯೋತಿಷ್ಯ ವರದಿಯ ಅಗತ್ಯವಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯನ್ನು ನೀಡಿತು ಮತ್ತು ಜಾಮೀನು ಅರ್ಜಿಯ ಅರ್ಹತೆಯ ಆಧಾರದಲ್ಲಿ ಅದನ್ನು ಇತ್ಯರ್ಥಗೊಳಿಸುವಂತೆ ನಿರ್ದೇಶನ ನೀಡಿತು.

ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಅತ್ಯಾಚಾರ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು. ಮಹಿಳೆಯು ತನ್ನ ಜಾತಕದಲ್ಲಿ ಕುಜದೋಷವನ್ನು ಹೊಂದಿದ್ದಾಳೆ. ಅದು ಸುಖಿ ವೈವಾಹಿಕ ಜೀವನಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಜ್ಯೋತಿಷಿಗಳು ನಂಬಿದ್ದಾರೆ,ಹೀಗಾಗಿ ತನ್ನ ಕಕ್ಷಿದಾರ ಆಕೆಯನ್ನು ಮದುವೆಯಾಗಲು ಬಯಸಿರಲಿಲ್ಲ ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ತನ್ನ ಕಕ್ಷಿದಾರಳು ಕುಜದೋಷವನ್ನು ಹೊಂದಿಲ್ಲ ಎಂದು ಮಹಿಳೆಯ ಪರ ವಕೀಲರು ವಾದಿಸಿದ್ದರು.

10 ದಿನಗಳಲ್ಲಿ ಆರೋಪಿ ಮತ್ತು ಸಂತ್ರಸ್ತ ಮಹಿಳೆಯ ಜಾತಕಗಳನ್ನು ಲಕ್ನೋ ವಿವಿಯ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸುವಂತೆ ಎರಡೂ ಕಡೆಯವರಿಗೆ ಆದೇಶಿಸಿದ್ದ ಉಚ್ಚ ನ್ಯಾಯಾಲಯವು,ಮೂರು ವಾರಗಳಲ್ಲಿ ಬಂದ್ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸುವಂತೆ ವಿಭಾಗ ಮುಖ್ಯಸ್ಥರಿಗೆ ಸೂಚಿಸಿತ್ತು.

ಆರೋಪಿಯು ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ತಾನು ಆತನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದೆ,ಆದರೆ ತಾನು ಕುಜದೋಷವನ್ನು ಹೊಂದಿದ್ದೇನೆ ಎಂದು ಹೇಳಿ ಆತ ತನ್ನ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಆದೇಶವನ್ನು ಗೊಂದಲಕಾರಿ ಎಂದು ಬಣ್ಣಿಸಿದ ಉ.ಪ್ರ.ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಉಚ್ಚ ನ್ಯಾಯಾಲಯವು ಜ್ಯೋತಿಷ್ಯದ ಗೋಜಿಗೆ ಹೋಗಬಾರದಿತ್ತು. ನ್ಯಾಯಾಲಯವು ಅರ್ಜಿಯೊಂದನ್ನು ಅಂಗೀಕರಿಸುವಾಗ ಇದೂ ಒಂದು ಅಂಶವಾಗಬಹುದೇ ಎನ್ನುವುದು ಏಕೈಕ ಪ್ರಶ್ನೆಯಾಗಿದೆ. ಈ ವಿಷಯದ ನ್ಯಾಯ ನಿರ್ಣಯ ಮಾಡುವಾಗ ಸಕ್ಷಮ ನ್ಯಾಯಾಲಯವು ಈ ವಿಷಯವನ್ನು ಪರಿಶೀಲಿಸುವಂತಿಲ್ಲ ಎಂದು ಶನಿವಾರ ವಿಚಾರಣೆ ಸಂದರ್ಭ ವಾದಿಸಿದರು.

ಉಚ್ಚ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಜೂ.26ರಂದು ನಡೆಸಲಿದೆ.

Similar News