ಒಡಿಶಾ ಭೀಕರ ರೈಲು ದುರಂತ: ಸಾವಿನ ಸಂಖ್ಯೆ 288ಕ್ಕೇರಿಕೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಉನ್ನತ ಮಟ್ಟದ ತನಿಖೆಗೆ ಕೇಂದ್ರದ ಆದೇಶ

Update: 2023-06-03 17:44 GMT

ಬಹನಾಗಾ: ಒಡಿಶಾದ ಬಾಲಸೋರ್ ಜಿಲ್ಲೆಯ  ಬಹನಾಗಾ ರೈಲು ನಿಲ್ದಾಣ ಸಮೀಪ ಶುಕ್ರವಾರ ಸಂಭವಿಸಿದ ಸರಣಿ ರೈಲು ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೇರಿದೆ. ಕಳೆದೆರಡು ದಶಕಗಳಲ್ಲೇ ಅತ್ಯಂತ ಭೀಕರ ಅವಘಡಗಳಲ್ಲೊಂದೆನಿಸಿದ ಈ ದುರಂತದಲ್ಲಿ   900ಕ್ಕೂ  ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ನತದೃಷ್ಟ  ರೈಲುಗಳ ಬೋಗಿಗಳಲ್ಲಿ  ಸಿಲುಕಿಕೊಂಡಿದ್ದ ಅನೇಕ ಮೃತದೇಹಗಳನ್ನು ರಕ್ಷಣಾ ತಂಡಗಳು ಶನಿವಾರ ಹೊರಗೆಳೆದಿವೆ.

ನಜ್ಜುಗುಜ್ಜಾದ ರೈಲು ಬೋಗಿಗಳಲ್ಲಿ ಇನ್ನೂ ಹಲವಾರು ಪ್ರಯಾಣಿಕರು ಸಿಕ್ಕಿಹಾಕಿಕೊಂಡಿರುವ ಭೀತಿಯಿದ್ದು, ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನಾಪಡೆಯನ್ನೂ ಕೂಡಾ ಕರೆಸಲಾಗಿದೆ.  ಈಗಾಗಲೇ 288 ಮೃತದೇಹಗಳನ್ನು ಹೊರಗೆಳೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಭೀತಿಯಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣೆ ಹಾಗೂ ಶೋಧ ಕಾರ್ಯಾಚರಣೆ ಶನಿವಾರ ರಾತ್ರಿಯವರೆಗೂ ಮುಂದುವರಿದಿರುವುದಾಗಿ ಅವು ಹೇಳಿವೆ.

 ಶನಿವಾರ ಸಂಜೆ  7:00 ಗಂಟೆಯ ಸುಮಾರಿಗೆ ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನಾಗಾದಲ್ಲಿ  ಬೆಂಗಳೂರು-ಹೌರಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ , ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ ಸರಕು ಸಾಗಣೆ ರೈಲು ನಡುವೆ ಭೀಕರ ಅವಘಡ ಸಂಭವಿಸಿತ್ತು.

ಬಹಾನಾಗಾ ರೈಲ್ವೆ ದುರಂತಕ್ಕೆ ಸಂಬಂಧಿಸಿ ರೈಲ್ವೆ ಇಲಾಖೆಯು ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿದೆ. ಆಗ್ನೇಯ ವಲಯದ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧುರಿ ನೇತೃತ್ವದಲ್ಲಿ  ತನಿಖೆಯ ನೇತೃತ್ವವನ್ನು ವಹಿಸಲಿದ್ದಾರೆಂದು  ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದುರಂತದ ಸ್ಥಳಕ್ಕೆ ಆಗಮಿಸಿದ್ದು,  ಅವಘಡಕ್ಕೀಡಾದ ಬೋಗಿಗಳನ್ನು ಪರಿಶೀಲಿಸಿದ್ದಾರೆ.  ಕೆಲವು ರಕ್ಷಿಸಲ್ಪಟ್ಟ ಪ್ರಯಾಣಿಕರು ಹಾಗೂ ಗಾಯಾಳುಗಳನ್ನು ಕೂಡಾ ಅವರು ಮಾತನಾಡಿಸಿದರು.

‘‘ ಘಟನೆಗೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ನಾವು ಅವಘಡದ ಮೂಲವನ್ನು ಕಂಡುಹಿಡಿಯಲಿದ್ದೇವೆ. ಸದ್ಯ ನಾವು ರಕ್ಷಣಾ ಕಾರ್ಯಾಚರಣೆಗೆ ಆದ್ಯತೆ ನೀಡುತ್ತೇವೆ. ಬೋಗಿಗಳಲ್ಲಿ ಸಿಲುಕಿಕೊಂಡಿರುವ  ಪ್ರಯಾಣಿಕರನ್ನು ರಕ್ಷಿಸಲು ಹಾಗೂ ಅವರಿಗೆ ತ್ವರಿತವಾಗಿ ಚಿಕಿತ್ಸೆಯನ್ನು ನೀಡಲು ವಿವಿಧ ಸ್ಥಳಗಳಿಂದ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು   ತರಿಸಲಾಗಿದೆ ’’ಎಂದು ಸಚಿವರು ಹೇಳಿದರು.

ಶುಕ್ರವಾರ ರಾತ್ರಿ 7:00 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದೆ. ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಸಮೀಪ ಹೌರಾಕ್ಕೆ ತೆರಳುತ್ತಿದ್ದ ಯಶವಂತಪುರ  ಎಕ್ಸ್ಪ್ರೆಸ್ನ  ಎರಡು ಬೋಗಿಗಳು ಹಳಿತಪ್ಪಿದ್ದವು. ಈ ಹಳಿತಪ್ಪಿದ ಬೋಗಿಗಳು ಪಕ್ಕದಲ್ಲಿರುವ ಹಳಿಗೆ  ಉರುಳಿಬಿದ್ದು, ಅದೇ  ಸಮಯದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ  12841ಶಾಲಿಮಾರ್- ಚೆನ್ನೈ ಕೊರಮಂಡಲ್ ಎಕ್ಸ್‌ಪ್ರೆಸ್ ಗೆ ಡಿಕ್ಕಿ ಹೊಡೆದಿದ್ದವು. ಇದರಿಂದಾಗಿ ಕೋರಮಂಡಲ್ ಎಕ್ಸ್‌ಪ್ರೆಸ್ ನ 17 ಬೋಗಿಗಳು ಹಳಿತಪ್ಪಿದ್ದವು ಹಾಗೂ ಪಕ್ಕದಲ್ಲೇ ಇದ್ದ ಗೂಡ್ಸ್ ರೈಲಿಗೂ ಅಪ್ಪಳಿಸಿದ್ದವು.

ಕವಚ ಸುರಕ್ಷತಾ ವ್ಯವಸ್ಥೆ ಇದ್ದಲ್ಲಿಅವಘಡ ತಪ್ಪುವ ಸಾಧ್ಯತೆಯಿತ್ತು ?

ರೈಲ್ವೆ ಢಿಕ್ಕಿಯಾಗುವುದನ್ನು ತಪ್ಪಿಸುವಂತಹ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ  ಕವಚ ಸುರಕ್ಷತಾ ವ್ಯವಸ್ಥೆ ಬಾಲಸೋರ್ ರೈಲು ಮಾರ್ಗದಲ್ಲಿ ಇರಲಿಲ್ಲವೆಂದು ರೈಲ್ವೆ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಒಂದು ವೇಳೆ ಈ ಮಾರ್ಗದಲ್ಲಿ ‘ಕವಚ’ ವ್ಯವಸ್ಥೆ ಇರುತ್ತಿದ್ದರೆ ರೈಲು ಅವಘಡವನ್ನು ತಪ್ಪಿಸಬಹುದಾಗಿತ್ತು ಎಂದು ವರದಿಗಳು ಹೇಳಿವೆ.

‘ಕವಚ’ ವ್ಯವಸ್ಥೆಯು ರೈಲುಗಳು ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸುತ್ತದೆ ಹಾಗೂ ಸ್ವಯಂಚಾಲಿತ ಬ್ರೇಕ್ ವ್ಯವಸ್ಥೆಯನ್ನು ಹೊಂದಿದೆ. ರೈಲುಗಳು ರೆಡ್ಸಿಗ್ನಲ್ ದಾಟುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದು, ತಕ್ಷಣವೇ ಬ್ರೇಕ್ ಹಾಕುವ ತಂತ್ರಜ್ಞಾನವಿದೆ.

ಕವಚ ರೈಲು ಸುರಕ್ಷತೆಯನ್ನು ಭಾರತ ಸರಕಾರ ಸ್ವಾಮ್ಯದ ಸಂಶೋಧನೆ,ವಿನ್ಯಾಸ ಹಾಗೂ ಮಾನದಂಡ ಸಂಸ್ಥೆ (DRSO)   ಅಭಿವೃದ್ಧಿಪಡಿಸಿದೆ.

ರಕ್ಷಣಾ, ಪರಿಹಾರ ಕಾರ್ಯಾಚರಣೆಗೆ ಸೇನೆಯ ನೆರವು

ಒಡಿಶಾದ ಬಹಾನಾಗಾದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಸರಣಿ ರೈಲು ಅವಘಡದ  ಗಾಯಾಳುಗಳ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಸೇನಾ ತುಕಡಿಗಳು   ಹಾಗೂ ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಸೇನೆಯ ಪೂರ್ವ ಕಮಾಂಡ್ನಿಂದ  ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ತಂಡಗಳನ್ನು ನಿಯೋಜಿಸಲಾಗಿದೆಯೆಂದವರು ತಿಳಿಸಿದ್ದಾರೆ. ಪಶ್ಚಿಮಬಂಗಾಳದ ಬರಾಕ್ಪೋರ್ ಹಾಗೂ ಪಶ್ಚಿಮ ಬಂಗಾಳದ ಪನಾಗಡದ ಸೇನಾ ನೆಲೆಗಳಿಂದ ಅವಘಡದ ಸ್ಥಳಕ್ಕೆ  ಮಿಲಿಟರಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸಿಬ್ಬಂದಿಯೊಂದಿಗೆ  ಸೇನಾ ತುಕಡಿಗಳು ಆಗಮಿಸಿವೆಯೆಂದು ಅಧಿಕಾರಿಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡ  ಪ್ರಯಾಣಿಕರನ್ನು  ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಆಸ್ಪತ್ರೆಗೆ ಸಾಗಿಸಲು ವಾಯುಪಡೆಯ ಎಂಐ 17 ವಿಮಾನಗಳನ್ನು  ನಿಯೋಜಿಸಲಾಗಿದೆಯೆಂದವರು ತಿಳಿಸಿದರು.

ರೈಲು ದುರಂತ ಒಡಿಶಾದಲ್ಲಿ ಶೋಕಾಚರಣೆ

ಬಾಲಸೋರ್ ನಲ್ಲಿ ಭೀಕರ ಸರಣಿ ರೈಲು ಅವಘಡದಲ್ಲಿ 261ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ  ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ರಾಜ್ಯದಲ್ಲಿ  ಶನಿವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದು,  ರಾಜ್ಯ ಮಟ್ಟದ ಎಲ್ಲಾ ಕಾರ್ಯಕ್ರಮಗಳನ್ನು  ರದ್ದುಗೊಳಿಸಲಾಯಿತು.

ಬಾಲಸೋರ್ ಸರಣಿ ರೈಲು ಅವಘಡದ  ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.  ಪ.ಬಂಗಾಳ ಸರಕಾರದ ಮುಖ್ಯ ಕಾರ್ಯದರ್ಸಿ  ಹಾಗೂ ಇತರ ಅಧಿಕಾರಿಗಳ ಜೊತೆಗೂಡಿ ತಾನು ಪರಿಸ್ಥಿತಿಯ ಮೇಲೆ ನಿಗಾವಿರಿಸಿರುವುದಾಗಿ ಅವರು ಹೇಳಿದ್ದಾರೆ. ಪ.ಬಂಗಾಳ ಸಚಿವೆ ಮಾನಸ್ ಭುನಿಯಾ ಹಾಗೂ ಸಂಸದೆ ಡೋಲಾ ಸೇನ್ ನೇತೃತ್ವದ ತಂಡವೊಂದನ್ನು ತಾನು   ಒಡಿಶಾಗೆ ಕಳುಹಿಸುವುದಾಗಿ ಪಶ್ಚಿಮಬಂಗಾಳದ ಮುಖ್ಯ ಕಾರ್ಯದರ್ಶಿ ಎಚ್.ಕೆ.ದ್ವಿವೇದಿ ತಿಳಿಸಿದ್ದಾರೆ.

ಬಾಲಸೋರ್ ರೈಲು ಅವಘಡ ಹಿನ್ನೆಲೆಯಲ್ಲಿ ಈವರೆಗೆ 18 ದೂರ ಸಂಚಾರದ ರೈಲುಗಳನ್ನು  ರದ್ದುಪಡಿಸಲಾಗಿದೆಯೆಂದು ಆಗ್ನೇಯ ರೈಲ್ವೆ ತಿಳಿಸಿದೆ.

ಅವಘಡದ ಸ್ಥಳದಲ್ಲಿ 115 ಆ್ಯಂಬುಲೆನ್ಸ್ ಗಳು, 50 ಬಸ್ ಗಳು ಹಾಗೂ 45 ಸಂಚಾರಿ ಆರೋಗ್ಯ ಘಟಕಗಳು ಕಾರ್ಯಾಚರಿಸುತ್ತಿದ್ದು, 1200 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್  ಗಳು ಸೇರಿದಂತೆ ಲಭ್ಯವಿರುವ ಎಲ್ಲಾ ರೀತಿಯ ವಾಹನಗಳಲ್ಲಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಒಂದು ಒಡಿಶಾದ ಅಧಿಕಾರಿಗಳು ತಿಳಿಸಿದ್ದಾರೆ.

Similar News