ಸಿಸೋಡಿಯಾ ಪತ್ನಿಯ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆ ವರದಿ ಕೋರಿದ ದಿಲ್ಲಿ ಹೈಕೋರ್ಟ್

Update: 2023-06-03 17:52 GMT

ಹೊಸದಿಲ್ಲಿ: ಆಪ್ ನಾಯಕ ಹಾಗೂ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಪತ್ನಿಯ ಆರೋಗ್ಯ ಸ್ಥಿತಿ ಕುರಿತು ದಿಲ್ಲಿ ಉಚ್ಚ ನ್ಯಾಯಾಲಯವು ಶನಿವಾರ ಇಲ್ಲಿಯ ಲೋಕನಾಯಕ ಜಯಪ್ರಕಾಶ (NNJP) ಆಸ್ಪತ್ರೆಯಿಂದ ಶನಿವಾರ ವರದಿಯನ್ನು ಕೋರಿದೆ. ಇದೇ ವೇಳೆ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಸೋದಿಯಾರ ಮಧ್ಯಂತರ ಜಾಮೀನು ಅರ್ಜಿಯ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿತು. ಸಿಸೋದಿಯಾರ ಪತ್ನಿ ಸೀಮಾ ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನ್ಯಾಯಾಲಯದ ನಿರ್ದೇಶನದಂತೆ ಸಿಸೋದಿಯಾರನ್ನು ಅನಾರೋಗ್ಯ ಪೀಡಿತ ಪತ್ನಿಯ ಭೇಟಿಗಾಗಿ ಶನಿವಾರ ಬೆಳಿಗ್ಗೆ ಜೈಲಿನ ವಾಹನದಲ್ಲಿ ಅವರ ನಿವಾಸಕ್ಕೆ ಕರೆತರಲಾಗಿತ್ತು. ಆದರೆ ಸಿಸೋದಿಯಾ ಆಗಮನಕ್ಕೆ ಮುನ್ನವೇ ಸೀಮಾರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಮಲ್ಟಿಪಲ್ ಸ್ಕ್ಲೆರೋಸಿಸ್ ಅಥವಾ ಬಹು ಅಂಗಾಂಶ ಪೆಡಸುಗೊಳ್ಳುವ ರೋಗದಿಂದ ಬಳುತ್ತಿರುವ ಸೀಮಾರನ್ನು ಕಳೆದ ತಿಂಗಳು ಕೂಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಮಥುರಾ ರಸ್ತೆಯಲ್ಲಿನ ತನ್ನ ನಿವಾಸದಲ್ಲಿ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಪತ್ನಿಯನ್ನು ಭೇಟಿಯಾಗಲು ಸಿಸೋದಿಯಾಗೆ ದಿಲ್ಲಿ ಉಚ್ಚ ನ್ಯಾಯಾಲಯವು ಅವಕಾಶವನ್ನು ಕಲ್ಪಿಸಿತ್ತು.

ಶನಿವಾರ ಸಿಸೋದಿಯಾ ಪರ ಹಿರಿಯ ವಕೀಲ ಮೋಹಿತ್ ಮಾಥೂರ್ ಅವರು,ನ್ಯಾಯಾಲಯದ ನಿರ್ದೇಶನದಂತೆ ತನ್ನ ಕಕ್ಷಿದಾರರನ್ನು ಶನಿವಾರ ಬೆಳಿಗ್ಗೆ ಅವರ ನಿವಾಸಕ್ಕೆ ಕರೆದೊಯ್ಯಲಾಗಿತ್ತಾದರೂ,ಆ ವೇಳೆಗಾಗಲೇ ಅವರ ಪತ್ನಿಯ ಆರೋಗ್ಯ ಬಿಗಡಾಯಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ನ್ಯಾ.ದಿನೇಶ ಕುಮಾರ ಶರ್ಮಾ ಅವರಿಗೆ ತಿಳಿಸಿದರು. ಸಿಸೋದಿಯಾ ತನ್ನ ಪತ್ನಿಯ ಬಗ್ಗೆ ಕಾಳಜಿ ವಹಿಸಬೇಕಾದ ಏಕೈಕ ವ್ಯಕ್ತಿಯಾಗಿರುವುದರಿಂದ ಅವರನ್ನು ತಾತ್ಕಾಲಿಕ ನೆಲೆಯಲ್ಲಿ ಬಿಡುಗಡೆಗೊಳಿಸುವಂತೆ ಮಾಥೂರ್ ಆಗ್ರಹಿಸಿದರು.

‘ವಾದಗಳನ್ನು ಆಲಿಸಲಾಗಿದೆ. ಆದೇಶವನ್ನು ಕಾಯ್ದಿರಿಸಲಾಗಿದೆ. ಎಲ್ಎನ್ಜೆಪಿಯಿಂದ ವರದಿಯನ್ನು ಕೋರಲಾಗಿದ್ದು,ಅದು ಮೊದಲು ನಮ್ಮ ಕೈಸೇರಲಿ ’ ಎಂದು ನ್ಯಾ.ಶರ್ಮಾ ತಿಳಿಸಿದರು.

Similar News