ಒಡಿಶಾ ರೈಲು ದುರಂತ: ಕೆಲಸ ಅರಸಿ ತಮಿಳುನಾಡಿಗೆ ತೆರಳುತ್ತಿದ್ದ ಪಶ್ಚಿಮ ಬಂಗಾಳದ ಮೂವರು ಸಹೋದರರು ಮೃತ್ಯು

ಅನಾಥವಾದ ಬಡ ಕುಟುಂಬ

Update: 2023-06-04 12:24 GMT

ಬರೂಯಿಪುರ: ಕೆಲಸ ಅರಸಿ ತಮಿಳುನಾಡಿಗೆ ತೆರಳುತ್ತಿದ್ದ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮೂವರು ಸಹೋದರರು ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸಂತಿ ಉತ್ತರದ ಚರಣಿಖಲಿ ಗ್ರಾಮದ ನಿವಾಸಿಗಳಾದ ಹರನ್ ಗಯೆನ್ (40), ನಿಶಿಕಾಂತ್ ಗಯೆನ್ (35) ಮತ್ತು ದಿಬಾಕರ್ ಗಯೆನ್ (32) ಸಾಮಾನ್ಯವಾಗಿ ದಕ್ಷಿಣ ರಾಜ್ಯದಲ್ಲಿ ವರ್ಷದಲ್ಲಿ ಹೆಚ್ಚಿನ ಸಮಯ ವಾಸಿಸುತ್ತಿದ್ದರು ಮತ್ತು ಅಲ್ಲಿ ಸಣ್ಣ ಕೆಲಸಗಳನ್ನು ಮಾಡುತ್ತಿದ್ದರು.

ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಅವರು ಈ ಬಾರಿ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಕೃಷಿ ಕೂಲಿ ಕೆಲಸ ಅರಸಿ ತಮಿಳುನಾಡಿಗೆ ತೆರಳುತ್ತಿದ್ದರು.

ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಕತ್ತಲು ಕವಿದಿತ್ತು. ನೆರೆಹೊರೆಯವರು ಸಾಂತ್ವನ ಹೇಳುತ್ತಿದ್ದು,  ಸಹೋದರರ ಪತ್ನಿಯರು ಸುದ್ದಿ ಕೇಳಿ ಪ್ರಜ್ಞೆ ತಪ್ಪಿದರು. ಹರನ್ ಪತ್ನಿ ಅನಾಜಿತಾ ನರ ರೋಗಿಯಾಗಿದ್ದು, ಆಕೆಯ ಚಿಕಿತ್ಸೆಯೇ ಈಗ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹರನ್  ಇಬ್ಬರು ವಿವಾಹಿತ ಹೆಣ್ಣುಮಕ್ಕಳು ಹಾಗೂ ಇತ್ತೀಚೆಗೆ ಸ್ಥಳೀಯ ಉಪಾಹಾರ ಗೃಹದಲ್ಲಿ ಕೆಲಸ ಮಾಡಲು ಆರಂಭಿಸಿರುವ ಒಬ್ಬ ಮಗನನ್ನು ಅಗಲಿದ್ದಾರೆ. ನಿಶಿಕಾಂತ್ ಅವರು  ಪತ್ನಿಯಲ್ಲದೆ, ಅಪ್ರಾಪ್ತರಾದ ಇಬ್ಬರು ಪುತ್ರಿ ಹಾಗೂ  ಒಬ್ಬ ಪುತ್ರನನ್ನು ಅಗಲಿದ್ದಾರೆ. ದಿಬಾಕರ್ ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ.

"ನನ್ನ ತಂದೆ ಹಾಗೂ  ಚಿಕ್ಕಪ್ಪ ಇನ್ನಿಲ್ಲ, ನಮ್ಮ ಕುಟುಂಬವು ಅನಾಥವಾಗಿದೆ" ಎಂದು ಹರನ್ ಮಗ ಅವಿಜಿತ್ ಹೇಳಿದರು.

ಶುಕ್ರವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಜಿಲ್ಲೆಯ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 110 ಮಂದಿ ಗಾಯಗೊಂಡಿದ್ದು, 44 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 16 ಮಂದಿ ಇದುವರೆಗೆ ತಮ್ಮ ಮನೆಗೆ ಮರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ  ಆರು ಜನರು ಬಸಂತಿ ಬ್ಲಾಕ್‌ನವರಾಗಿದ್ದಾರೆ.  ಇದರಲ್ಲಿ ಮೂವರು ಸಹೋದರರು  ಇದ್ದಾರೆ  ಎಂದು ಅವರು ಹೇಳಿದರು. ಜಿಲ್ಲೆಯ ಸಂತ್ರಸ್ತರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರಾಗಿದ್ದರೆ, ಉಳಿದವರು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News