ನ್ಯಾಯ ಕೇಳುತ್ತಿರುವ ಹೆಣ್ಣುಮಕ್ಕಳಿಗಾಗಿ ಜಗತ್ತೇ ಮರುಗುತ್ತಿದ್ದರೂ ಆರೋಪಿಯ ರಕ್ಷಣೆಗೆ ನಿಂತ ಭಂಡ ಸರಕಾರ

Update: 2023-06-04 07:21 GMT

ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಹೊತ್ತ ಈ ಸಂಸದನನ್ನು ಬಿಜೆಪಿ ಯಾಕೆ ಕಾಂಗರೂ ತನ್ನ ಮಗುವನ್ನು ತನ್ನ ಹೊಟ್ಟೆಯ ಚೀಲದಲ್ಲಿ ಇಟ್ಟುಕೊಂಡು ರಕ್ಷಿಸಿದಂತೆ ರಕ್ಷಿಸುತ್ತಿದೆ? ಈತನ ಪರವಾಗಿ ಸಮಾವೇಶ ನಡೆಸಲು ಉತ್ತರ ಪ್ರದೇಶದ ಬಿಜೆಪಿ ಶಾಸಕರೇ ಯಾಕೆ ಜನರನ್ನು ಸೇರಿಸುತ್ತಾರೆ? ಇಷ್ಟು ಗಂಭೀರ ಆರೋಪ ಎದುರಿಸುತ್ತಿರುವ ಈತನಿಗೆ ಅಯೋಧ್ಯೆಯ ಸಂತರು ಏಕೆ ಬೆಂಬಲ ಸೂಚಿಸುತ್ತಿದ್ದಾರೆ?

‘‘ಜನ ಏನು ಬೇಕಾದರೂ ಹೇಳಲಿ. ನಾನೊಂದು ಗುಂಡು ಹಾರಿಸಿ ಮರ್ಡರ್ ಮಾಡಿದ್ದು ಹೌದು.’’

ಹೀಗೆಂದು ರಾಜಾರೋಷವಾಗಿ ಸಂದರ್ಶನದಲ್ಲಿ ಹೇಳಿಯೂ ಕೊಲೆ ಪ್ರಕರಣದಲ್ಲಿ ಬಂಧನವಾಗದ, ವಿಚಾರಣೆ ಎದುರಿಸದ ವ್ಯಕ್ತಿ ಈ ದೇಶ ನಡೆಸುತ್ತಿರುವ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್!

‘‘ನೀವು ೧೫ ರೂಪಾಯಿಯ ಮೆಡಲ್ ವಾಪಸ್ ಕೊಟ್ಟು ಯಾವ ಪ್ರಯೋಜನವೂ ಇಲ್ಲ. ಕೊಡುವುದಿದ್ದರೆ ನಿಮಗೆ ಸಿಕ್ಕಿದ ಕೋಟಿಗಟ್ಟಲೆ ರೂಪಾಯಿ ಬಹುಮಾನವನ್ನು ವಾಪಸ್ ಕೊಡಿ’’ ಎಂದು, ದೇಶಕ್ಕೆ ಬಂದ ಒಲಿಂಪಿಕ್ಸ್ ಪದಕಗಳಿಗೆ ಅವಮಾನ ಮಾಡುವ ಆಡಳಿತ ಪಕ್ಷದ ಸಂಸದ ಈತ.

ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಹೊತ್ತ ಈ ಸಂಸದನನ್ನು ಬಿಜೆಪಿ ಯಾಕೆ ಕಾಂಗರೂ ತನ್ನ ಮಗುವನ್ನು ತನ್ನ ಹೊಟ್ಟೆಯ ಚೀಲದಲ್ಲಿ ಇಟ್ಟುಕೊಂಡು ರಕ್ಷಿಸಿದಂತೆ ರಕ್ಷಿಸುತ್ತಿದೆ? ಈತನ ಪರವಾಗಿ ಸಮಾವೇಶ ನಡೆಸಲು ಉತ್ತರ ಪ್ರದೇಶದ ಬಿಜೆಪಿ ಶಾಸಕರೇ ಯಾಕೆ ಜನರನ್ನು ಸೇರಿಸುತ್ತಾರೆ? ಇಷ್ಟು ಗಂಭೀರ ಆರೋಪ ಎದುರಿಸುತ್ತಿರುವ ಈತನಿಗೆ ಅಯೋಧ್ಯೆಯ ಸಂತರು ಏಕೆ ಬೆಂಬಲ ಸೂಚಿಸುತ್ತಿದ್ದಾರೆ?

ಈ ದೇಶಕ್ಕೆ ಹೆಮ್ಮೆ ತಂದಿರುವ ಮಹಿಳಾ ಕುಸ್ತಿಪಟುಗಳು ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಅವರು ಬಿಕ್ಕಳಿಸಿ ಅಳುವುದನ್ನು ನೋಡಿ ಇಡೀ ದೇಶವೇ ದಂಗಾಗಿದೆ. ತಮ್ಮ ಜೀವಮಾನದ ಶ್ರೇಷ್ಠ ಗಳಿಕೆಯಾದ ಅಂತರ್ ರಾಷ್ಟ್ರೀಯ ಪದಕಗಳನ್ನು ಗಂಗಾನದಿಗೆ ಹಾಕಿಬಿಡುತ್ತೇವೆ ಎನ್ನುವ ಮಟ್ಟಿಗೆ ಅವರೆಲ್ಲ ನ್ಯಾಯಕ್ಕಾಗಿ ಕಾದು ಕಾದು ಹತಾಶರಾಗಿದ್ದಾರೆ. ಪ್ರತಿಭಟನಾ ನಿರತ ಕುಸ್ತಿಪಟುಗಳ ಪರವಾಗಿ ದೇಶಾದ್ಯಂತ ಎಲ್ಲ ಕ್ಷೇತ್ರಗಳ ಗಣ್ಯರಿಂದ ಬೆಂಬಲ ವ್ಯಕ್ತವಾಗುತ್ತಿದೆ. ವಿಶ್ವ ಕುಸ್ತಿ ಕ್ರೀಡೆಯ ಸಂಘಟನೆ ಕೂಡ ಸರಕಾರದ ಧೋರಣೆಯನ್ನು ಖಂಡಿಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದೆ.

ಆದರೆ, ದೇಶದ ಕೀರ್ತಿ ಪತಾಕೆ ಹಾರಿಸುವ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಾತ್ರ ರಾಜಾರೋಷವಾಗಿ ಓಡಾಡಿಕೊಂಡೇ ಇರುವುದು ‘ಬೇಟಿ ಬಚಾವೋ’ ಎನ್ನುವ ಬಿಜೆಪಿ ಸರಕಾರದ ಭಂಡತನಕ್ಕೆ ಸಾಕ್ಷಿ.

ಗಂಗಾನದಿಗೆ ಪದಕ ಎಸೆಯಲು ಹರಿದ್ವಾರಕ್ಕೆ ಕುಸ್ತಿಪಟುಗಳು ಹೋದದ್ದನ್ನು ಮಹಾನಾಟಕ ಎಂದು ಹೀಗಳೆದಿರುವ ಬ್ರಿಜ್ ಭೂಷಣ್, ‘‘ನೀವು ಗಂಗಾ ನದಿಗೆ ಪದಕ ಎಸೆದರೆ ನನಗೆ ಗಲ್ಲುಶಿಕ್ಷೆಯಾ ಗುವುದಿಲ್ಲ’’ ಎಂದು ಕುಹಕವಾಡಿರುವುದು, ಸಾಕ್ಷಿ ಕೊಡಿ ಎಂದು ಹೇಳುತ್ತಿರುವುದು ತನ್ನ ಬೆನ್ನ ಹಿಂದಿರುವ ಬಿಜೆಪಿ ಹಾಗೂ ಮೋದಿ ಅವರ ರಾಜಕೀಯ ಬಲದಿಂದಲೇ ಎಂಬುದು ಸ್ಪಷ್ಟ.

ಕೆಲ ತಿಂಗಳುಗಳಿಂದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಭಾರತೀಯ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರೂ ತನ್ನ ಒಬ್ಬ ಸಂಸದನನ್ನು ರಕ್ಷಿಸುವುದಕ್ಕಾಗಿ ಬಿಜೆಪಿ ಪಣ ತೊಟ್ಟು ನಿಂತುಬಿಟ್ಟಿದೆ. ಸುಪ್ರೀಂ ಕೋರ್ಟ್ ಖಡಕ್ಕಾಗಿ ಸೂಚಿಸುವವರೆಗೂ ಕುಸ್ತಿಪಟುಗಳ ದೂರಿನ ಆಧಾರದಲ್ಲಿ ಬ್ರಿಜ್ ಭೂಷಣ್ ವಿರುದ್ಧ ಎಫ್‌ಐ ಆರ್‌ಅನ್ನೂ ದಾಖಲಿಸಿರಲಿಲ್ಲ ದಿಲ್ಲಿ ಪೊಲೀಸರು.

ಈಗ ಕುಸ್ತಿಪಟುಗಳ ಬೆಂಬಲಕ್ಕೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಕೂಡ ನಿಂತಿದ್ದು, ಬಿಜೆಪಿ ಸಂಸದನ ವಿರುದ್ಧದ ಕುಸ್ತಿಪಟುಗಳ ದಿಟ್ಟ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅದು ಮುಂದಾಗಿದೆ. ಪದಕಗಳನ್ನು ಗಂಗಾನದಿಗೆ ಎಸೆಯಲು ಕುಸ್ತಿಪಟುಗಳು ಹೊರಟಾಗ ಅವರ ಮನವೊಲಿಸಿ ಕರೆದುಕೊಂಡು ಬಂದಿರುವುದು ಇದೇ ರೈತನಾಯಕರು. ಬ್ರಿಜ್ ಭೂಷಣ್ ಬಂಧನವಾಗದಿದ್ದರೆ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಲು ತರಕಾರಿ ಪೂರೈಕೆ ಸ್ಥಗಿತಗೊಳಿಸುತ್ತೇವೆ ಎಂದು ಬಿಕೆಯು ವಕ್ತಾರ ನರೇಶ್ ಟಿಕಾಯತ್ ಮೋದಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಉತ್ತರ ಪ್ರದೇಶದ ಮುಝಫರ್ ನಗರದ ಸೋರಮ್‌ನಲ್ಲಿ ಬಿಕೆಯು ನೇತೃತ್ವದಲ್ಲಿ ಮಹಾಪಂಚಾಯತ್ ಸಭೆ ಕೂಡ ನಡೆದಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಲೈಂಗಿಕ ಕಿರುಕುಳದ ಆರೋಪ ಹೊತ್ತ ಸಂಸದನನ್ನು, ಅದೂ ಪೊಕ್ಸೊದಂಥ ಪ್ರಕರಣ ದಾಖಲಾಗಿದ್ದರೂ ಸರಕಾರ ಏಕೆ ಬಂಧಿಸುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಕಳೆದ ಜನವರಿಯಲ್ಲಿಯೇ ಲೈಂಗಿಕ ಕಿರುಕುಳದ ಆರೋಪ ಬಂದಾಗ ಅದನ್ನು ಪ್ರಚಾರದ ಸ್ಟಂಟ್ ಎಂದು ಬಿಂಬಿಸಿದ್ದು ಇದೇ ಆರೋಪಿ ಸಂಸದ ಬ್ರಿಜ್ ಭೂಷಣ್. ಪ್ರತಿಭಟನೆ ನಡೆಸಿದ ಕುಸ್ತಿಪಟುಗಳಿಗೆ ‘‘ಇನ್ನು ಮುಂದೆ ಪದಕಗಳನ್ನು ಗೆಲ್ಲಲು ಸಾಧ್ಯವಿಲ್ಲ, ಅವರ ವೃತ್ತಿಜೀವನ ಮುಗಿದಿದೆ’’ ಎಂದು ವ್ಯಂಗ್ಯವಾಡಿ, ಅವರಿಗೆ ಪರೋಕ್ಷ ಬೆದರಿಕೆ ಒಡ್ಡಿದ ಹಾಗೆಯೂ ಇತ್ತು.

ಅದಾಗಿ ಮೂರು ತಿಂಗಳುಗಳ ಬಳಿಕ ಮತ್ತೆ ಕುಸ್ತಿಪಟುಗಳು ಈ ಸಂಸದನ ವಿರುದ್ಧ ಪ್ರತಿಭಟನೆಗೆ ಇಳಿದಿರುವುದು, ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಎಲ್ಲ ಕಡೆಯಿಂದ ಒತ್ತಡ ಹೆಚ್ಚುತ್ತಿರುವುದು ಬಿಜೆಪಿಗೆ ತೀರಾ ಇಕ್ಕಟ್ಟಿನ ಸ್ಥಿತಿಯನ್ನು ತಂದಿಟ್ಟ ಹಾಗಿದೆ.

ಏಕೆ ಬಿಜೆಪಿ ಈ ಆರೋಪಿಯನ್ನು ರಕ್ಷಿಸಲು ಇಷ್ಟೊಂದು ಹೆಣಗಾಡುತ್ತಿದೆ? ಯಾರು ಈ ಬ್ರಿಜ್ ಭೂಷಣ್ ಸಿಂಗ್? ಏನು ಬ್ರಿಜ್ ಭೂಷಣ್ ರಾಜಕೀಯ ಹಿನ್ನೆಲೆ?

ಈ ಬ್ರಿಜ್ ಭೂಷಣ್ ಉತ್ತರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನೂ, ಜಾತಿ ಪ್ರಭಾವವನ್ನೂ ಹೊಂದಿರುವ ಬಿಜೆಪಿ ಮುಖಂಡ. ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಹುದ್ದೆಯಲ್ಲಿರುವ ಬ್ರಿಜ್ ಭೂಷಣ್ ಹಿನ್ನೆಲೆ ಪರಿಶೀಲಿಸಿದರೆ ಆಘಾತಕಾರಿ ಕಥೆಗಳೇ ಬಿಚ್ಚಿಕೊಳ್ಳುತ್ತವೆ.

ಉತ್ತರ ಪ್ರದೇಶದ ಕೈಸರ್‌ಗಂಜ್ ಕ್ಷೇತ್ರದ ಸಂಸದನಾಗಿ ಬಿಜೆಪಿಯಿಂದ ಆಯ್ಕೆಯಾಗಿರುವ ಬ್ರಿಜ್ ಭೂಷಣ್, ೨೦೧೨ರಿಂದಲೂ ಡಬ್ಲ್ಯುಎಫ್‌ಐ ಮುಖ್ಯಸ್ಥ. ೬೬ ವರ್ಷ ವಯಸ್ಸಿನ ರಜಪೂತ ಸಮುದಾಯದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕ್ರಿಮಿನಲ್ ಇತಿಹಾಸ ಹೊಂದಿರುವ ಬಿಜೆಪಿ ನಾಯಕ.

೧೯೯೧ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದ ಬ್ರಿಜ್ ಭೂಷಣ್ ವಿರುದ್ಧ ಕೊಲೆ ಯತ್ನ, ಡಕಾಯಿತಿ, ಸಾಕ್ಷ್ಯಾಧಾರಗಳ ನಾಶ ಸೇರಿದಂತೆ ಅನೇಕ ಗಂಭೀರ ಆರೋಪಗಳಿವೆ. ತನ್ನ ರಾಜಕೀಯ ವಿರೋಧಿಗಳ ಮೇಲೆ ಮಾರಣಾಂತಿಕ ದಾಳಿ ಮಾಡಿಸಿರುವ ಆರೋಪವೂ ಈತನ ಮೇಲಿದೆ. ಅಚ್ಚರಿಯೆಂದರೆ ಆ ಯಾವುದರಲ್ಲೂ ಶಿಕ್ಷೆಯಾಗಿಲ್ಲ.

ಆರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಬ್ರಿಜ್ ಭೂಷಣ್, ಪ್ರತಿನಿಧಿಸಿರುವುದು ಗೊಂಡಾ, ಕೈಸರ್‌ಗಂಜ್ ಮತ್ತು ಬಲರಾಂಪುರ ಕ್ಷೇತ್ರಗಳನ್ನು. ಗೊಂಡಾ, ಬಲರಾಂಪುರ, ಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಬ್ರಿಜ್ ಭೂಷಣ್ ಪ್ರಾಬಲ್ಯವಿದೆ. ಕಾಲೇಜು ದಿನಗಳಲ್ಲಿ ಈತ ಕುಸ್ತಿಪಟು ಕೂಡ ಆಗಿದ್ದ.

ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದದ್ದು ೧೯೯೧ರಲ್ಲಿ. ಬಳಿಕ ೧೯೯೯, ೨೦೦೪, ೨೦೦೯, ೨೦೧೪ ಮತ್ತು ೨೦೧೯ರಲ್ಲಿ ಲೋಕಸಭೆಗೆ ಮರು ಆಯ್ಕೆ. ೨೦೦೮ರಲ್ಲಿ ಬಿಜೆಪಿ ಹೊರದಬ್ಬಿದಾಗ ಸಮಾಜವಾದಿ ಪಕ್ಷ ಸೇರಿ ೨೦೦೯ರಲ್ಲಿ ಗೆಲುವು. ೨೦೧೪ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಮರಳಿ, ೨೦೧೪ ಮತ್ತು ೨೦೧೯ರಲ್ಲಿ ಮತ್ತೆ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆ. ಬ್ರಿಜ್ ಭೂಷಣ್ ಪುತ್ರ ಪ್ರತೀಕ್ ಭೂಷಣ್ ಕೂಡ ರಾಜಕೀಯದಲ್ಲಿದ್ದು, ಗೊಂಡಾ ಕ್ಷೇತ್ರದ ಬಿಜೆಪಿ ಶಾಸಕ.

ಬ್ರಿಜ್ ಭೂಷಣ್‌ಗೆ ಬಿಜೆಪಿ ಜೊತೆ ದೀರ್ಘಕಾಲದ ಒಡನಾಟ. ಸಮಾಜವಾದಿ ಪಕ್ಷದೊಂದಿಗೆ ಕೆಲ ಕಾಲ ಗುರುತಿಸಿಕೊಂಡಿದ್ದರ ಹೊರತಾಗಿ ಇಡೀ ರಾಜಕೀಯ ಬಿಜೆಪಿ ಜೊತೆಗಿನದು. ರಾಮಜನ್ಮಭೂಮಿ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದ ಬ್ರಿಜ್ ಭೂಷಣ್ ಹೆಸರು, ವಿವಾದಿತ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿಯೂ ಕೇಳಿಬಂದಿತ್ತು. ಆದರೂ, ಸುದೀರ್ಘ ಕಾನೂನು ಹೋರಾಟದ ನಂತರ ಸೆಪ್ಟ್ಟಂಬರ್ ೨೦೨೦ರಲ್ಲಿ ಎಲ್ಲಾ ಆರೋಪಗಳಿಂದ ಖುಲಾಸೆ. .

೧೯೯೬ರಲ್ಲಿ ದಾವೂದ್ ಇಬ್ರಾಹೀಂ ಸಹಚರರಿಗೆ ಆಶ್ರಯ ನೀಡಿದ್ದಕ್ಕಾಗಿ ಟಾಡಾ ಪ್ರಕರಣದಲ್ಲಿ ಆರೋಪಿ. ಹಲವು ತಿಂಗಳುಗಳ ಜೈಲುವಾಸದ ಬಳಿಕ ಖುಲಾಸೆ.

ಡಿಸೆಂಬರ್ ೨೦೨೧ರಲ್ಲಿ ರಾಂಚಿಯಲ್ಲಿ ಸಾರ್ವಜನಿಕವಾಗಿ ಅತ್ಲೀಟ್‌ಗೆ ಕಪಾಳಮೋಕ್ಷ ಮಾಡಿದ್ದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದರೂ ಅದಕ್ಕಾಗಿ ಬ್ರಿಜ್ ಭೂಷಣ್ ಕ್ಷಮೆ ಯಾಚಿಸಲಿಲ್ಲ.

ಅದೇ ವರ್ಷ ಜನವರಿಯಲ್ಲಿ ನೊಯ್ಡಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರೈಲ್ವೇಸ್ ಕೋಚ್ ಅನ್ನು ಇದೇ ವ್ಯಕ್ತಿ ಅಮಾನತುಗೊಳಿಸಿದ್ದು ಕೂಡ ಸುದ್ದಿಯಾಗಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ೫೯ ಕೆಜಿ ವಿಭಾಗದಲ್ಲಿ ಭಾರತದ ಪ್ರಾತಿನಿಧ್ಯ ಆಯ್ಕೆ ವೇಳೆ, ಕಾರ್ಯಕ್ರಮ ಆರಂಭಕ್ಕೂ ಮುನ್ನ ಆಶೀರ್ವಾದ ನೀಡಲು ಅಯೋಧ್ಯೆಯ ಸ್ವಾಮೀಜಿಗಳನ್ನು ಆಹ್ವಾನಿಸಲಿಲ್ಲ ಎಂಬ ಕಾರಣಕ್ಕೆ ಆಯ್ಕೆ ಟ್ರಯಲ್ಸ್ ಅನ್ನು ೫೪ ಸೆಕೆಂಡುಗಳ ನಂತರ ಥಟ್ಟನೆ ನಿಲ್ಲಿಸಿದ್ದ ವಿಚಾರವೂ ಸದ್ದು ಮಾಡಿತ್ತು.

ಬ್ರಿಜ್ ಭೂಷಣ್ ರಾಜಕೀಯ ಪ್ರಾಬಲ್ಯದಿಂದಾಗಿ ಬಿಜೆಪಿಯನ್ನು ಟೀಕಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಈ ಪ್ರಕರಣದ ಬಗ್ಗೆ ಚಕಾರ ಎತ್ತಿರಲಿಲ್ಲ. ಅವರ ಪತ್ನಿ ಡಿಂಪಲ್ ಮಾತ್ರ ಈ ಬಗ್ಗೆ ಕ್ರಮವಾಗಬೇಕು ಎಂದು ಹೇಳಿದ್ದರು. ಅಂದರೆ ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳು ಮಹಿಳಾ ಕ್ರೀಡಾಪಟುಗಳ ಹಿತಕ್ಕಿಂತ ದೊಡ್ಡದಾಗಿವೆ.

ಈಗ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಅತಿ ಗಂಭೀರ ಆರೋಪ ಕೇಳಿಬಂದಿದೆ. ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆಯ ಆರೋಪಗಳನ್ನು ಮಾಡಲಾಗಿದೆ. ಈಗಾಗಲೇ ಬ್ರಿಜ್ ಭೂಷಣ್ ವಿರುದ್ಧ ೭ ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದಿಲ್ಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಆದರೆ ಈವರೆಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕವಷ್ಟೇ ಎಫ್‌ಐಆರ್ ದಾಖಲಾದವಾದರೂ, ಈವರೆಗೆ ಆರೋಪಿಯನ್ನು ಪೊಲೀಸ್ ತನಿಖೆಗೆ ಒಳಪಡಿಸಿಲ್ಲ.

ಈ ನಡುವೆ ಬ್ರಿಜ್ ಭೂಷಣ್ ವಿರುದ್ಧ ದಿಲ್ಲಿ ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ ಎಂದೂ ಹಲವು ಚಾನೆಲ್‌ಗಳಲ್ಲಿ ವರದಿ ಪ್ರಸಾರವಾಯಿತು. ಆದರೆ, ಸಾಕ್ಷ್ಯಾಧಾರಗಳಿಲ್ಲ ಎನ್ನುವುದು ಸುಳ್ಳೆಂದೂ, ತನಿಖೆ ಪ್ರಗತಿಯಲ್ಲಿದೆ ಎಂದೂ ದಿಲ್ಲಿ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಇವೆಲ್ಲದರ ಮಧ್ಯೆಯೆ ತನ್ನ ವಿರುದ್ಧ ಸಾಕ್ಷ್ಯ ಕೊಡಿ ಎಂದು ಬ್ರಿಜ್ ಭೂಷಣ್ ಸವಾಲು ಹಾಕಿರುವುದು, ‘‘ಒಂದೇ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುತ್ತೇನೆ’’ ಎಂದಿರುವುದೂ ಆಗಿದೆ. ಲೈಂಗಿಕ ಕಿರುಕುಳ ಆಗಿದ್ದರೆ ಸಾಕ್ಷ್ಯ ಕೊಡಲಿ. ಅದಕ್ಕಿಂತ ಮೊದಲೇ ಅರೆಸ್ಟ್ ಮಾಡಿ ಎಂದರೆ ಹೇಗೆ? ನಾಳೆ ಯಾರ ಮೇಲೂ ಈ ರೀತಿಯ ಆರೋಪ ಬರಬಹುದು ಎಂದೂ ಪೊಲೀಸ್ ಅಧಿಕಾರಿಯಾಗಿದ್ದವರೇ ಬ್ರಿಜ್ ಭೂಷಣ್ ಪರವಾಗಿ ವಾದಿಸುತ್ತಿರುವುದೂ ನಡೆದಿದೆ.

ಇನ್ನು ಪ್ರತಿಭಟನೆ ನಡೆಸುವವರನ್ನೇ ಟಾರ್ಗೆಟ್ ಮಾಡುವ, ಅವರನ್ನು ಅವಹೇಳನ ಮಾಡುವ, ಅವರ ವಿರುದ್ಧವೇ ಆಧಾರರಹಿತ ಸುಳ್ಳಾರೋಪ ಮಾಡುವ ಬಿಜೆಪಿ, ಸಂಘ ಪರಿವಾರದ ಈ ಹಿಂದಿನ ಟೂಲ್ ಕಿಟ್ ಇಲ್ಲೂ ಬಳಕೆಗೆ ಬಂದಿದೆ.

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಹೇಳುವ ಹಾಗೆ, ಒಬ್ಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ ಸಂದರ್ಭದಲ್ಲಿ ಅದನ್ನು ಸಂತ್ರಸ್ತೆ ಸಾಕ್ಷ್ಯ ಸಮೇತ ಕಾನೂನಿನ ಎದುರು ಸಾಬೀತುಪಡಿಸುವುದು ಆಗದು. ಬೇರೆಲ್ಲ ಪ್ರಕರಣಗಳಲ್ಲಿ ಆಪಾದನೆ ಮಾಡಿದಾಗ ಅದನ್ನು ಸಾಬೀತುಪಡಿಸುವುದು ಆಪಾದನೆ ಮಾಡಿದವರ ಹೊಣೆ ಎಂದು ಕಾನೂನು ಶಾಸ್ತ್ರ ಹೇಳುತ್ತದೆ. ಆದರೆ ಲೈಂಗಿಕ ಪ್ರಕರಣಗಳಲ್ಲಿ ಸಂತ್ರಸ್ತೆಯ ಆರೋಪವಷ್ಟೇ ಸಾಕಾಗುತ್ತದೆ. ಅದನ್ನು ಸುಳ್ಳೆಂದು ಸಾಬೀತುಪಡಿಸಬೇಕಿರುವುದು ಆರೋಪಿಯ ಹೊಣೆ. ಪೊಕ್ಸೊದಂಥ ಹೀನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪ್ರಕರಣ ದಾಖಲಾದ ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸುವುದು ಮತ್ತು ಸಂತ್ರಸ್ತರಿಗೆ ಆರೋಪಿಯಿಂದ ತೊಂದರೆಯಾಗದಂತೆ ಎಚ್ಚರ ವಹಿಸುವುದು ಸಹಜ ನ್ಯಾಯ. ಆದರೆ ಅದಾವುದೂ ಈ ಪ್ರಕರಣದಲ್ಲಿ ಆಗಿಲ್ಲ.

ತನ್ನ ಸಂಸದನೊಬ್ಬನ ಮೇಲೆ ಗಂಭೀರ ಆಪಾದನೆ ಬಂದಾಗ, ಕಾನೂನಿನ ಅಡಿ ನಿರಪರಾಧಿತ್ವ ಸಾಬೀತುಪಡಿಸಲು ಆತನಿಗೆ ಸರಕಾರ ಸೂಚಿಸಬೇಕು. ಬದಲಾಗಿ, ಆತನನ್ನು ಬೇಕಾಬಿಟ್ಟಿ ಮಾತನಾಡಲು, ಓಡಾಡಲು ಬಿಟ್ಟು, ಇನ್ನೂ ಆತ ದರ್ಪದಿಂದಲೇ ಮೆರೆಯುತ್ತಿರುವುದಕ್ಕೆ ಅವಕಾಶ ನೀಡಿ ಸರಕಾರ ಗಾಢ ಮೌನ ವಹಿಸಿರುವುದು ವಿಪರ್ಯಾಸ.

ಮತ್ತೊಂದೆಡೆ, ಈ ಪ್ರಕರಣದಿಂದ ಪಾರಾಗಲು ಆರೋಪಿಯ ಪರವಾಗಿ ತೆರೆಮರೆಯ ಕಸರತ್ತುಗಳೂ ನಡೆದಿವೆ ಎಂಬ ಮಾತುಗಳಿವೆ. ಕುಸ್ತಿ ಫೆಡರೇಷನ್‌ನ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಈ ಪ್ರಕರಣ ಕುರಿತ ಹಲವು ಸರ್ಕ್ಯುಲರ್‌ಗಳಿಗೆ ಅವು ಪ್ರಕಟಗೊಂಡ ದಿನಾಂಕವಾಗಲೀ, ಸರ್ಕ್ಯುಲರ್ ನಂಬರ್ ಇತ್ಯಾದಿಗಳಾಗಲೀ ಇಲ್ಲವೆನ್ನಲಾಗಿದೆ. ಇವೆಲ್ಲವೂ ಈಗ ಪ್ರಕರಣ ತೀವ್ರಗೊಂಡ ಬಳಿಕ ಸೃಷ್ಟಿಯಾಗಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಅದೇ ನಿಜವಾಗಿದ್ದಲ್ಲಿ ಅವೆಲ್ಲವೂ ಸಾಕ್ಷ್ಯ ತಿರುಚುವ ಪ್ರಯತ್ನಗಳೇ. ನ್ಯಾಯಾಂಗೀಯ ತಪಾಸಣೆಗಳಲ್ಲಿ ಇವು ಸುಲಭವಾಗಿ ಬಯಲಾಗಬಲ್ಲವು.

ಒಬ್ಬ ಆಪಾದಿತನ ಅನಗತ್ಯ ರಕ್ಷಣೆಗೆ ಸರಕಾರ ಮುಂದಾದರೆ, ಅದು ಒಂದು ಸುಳ್ಳಿಗೆ ಹತ್ತು ಸುಳ್ಳು ಸೇರಿಸಬೇಕಾಗುತ್ತದೆ. ಈಗಾಗಲೇ ಬಿಜೆಪಿ ನಾಯಕರು, ವಕ್ತಾರರು ಪ್ರಕರಣ ಕುರಿತ ಪ್ರಶ್ನೆಗಳನ್ನು ಎದುರಿಸಲಾಗದೆ ಓಡಿ ಹೋಗುವ ಪರಿಸ್ಥಿತಿ ಬಂದಿದೆ. ವಿಶೇಷವಾಗಿ ಬಿಜೆಪಿಯ ಮಹಿಳಾ ನಾಯಕರು ಮುಂದಿನ ದಿನಗಳಲ್ಲಿ ಈ ಬಗ್ಗೆ ಹಲವು ಕಠಿಣ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕಾಗುತ್ತದೆ.

ಮುಂದಿನ ಲೋಕಸಭೆ ಚುನಾವಣೆಗೂ ಮೊದಲಿನ ಈ ವಿದ್ಯಮಾನ ಬಿಜೆಪಿಗೆ ದುಬಾರಿಯೂ ಆಗಬಹುದಾದ ಸಾಧ್ಯತೆಗಳೇ ಕಾಣಿಸುತ್ತಿವೆ.

Similar News