ರೈಲು ದುರಂತಕ್ಕೆ ಕೋಮು ಆಯಾಮ ನೀಡುವವರ ವಿರುದ್ಧ ಕ್ರಮ: ಒಡಿಶಾ ಪೊಲೀಸರ ಎಚ್ಚರಿಕೆ

Update: 2023-06-04 13:26 GMT

ಹೊಸದಿಲ್ಲಿ: ಒಡಿಶಾದಲ್ಲಿ ನಡೆದ ರೈಲು ಅಪಘಾತದ ಪ್ರಕರಣಕ್ಕೆ 'ಕೋಮು ಆಯಾಮ'ನ ನೀಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒಡಿಶಾ ಪೊಲೀಸರು ಎಚ್ಚರಿಸಿದ್ದಾರೆ.

ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಹರಡುವುದನ್ನು ತಡೆಯಲು ಜನರನ್ನು ಒತ್ತಾಯಿಸಿದ ಪೊಲೀಸರು, ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

“ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತಕ್ಕೆ ಕುಚೇಷ್ಟೆಯಿಂದ ಕೋಮು ಬಣ್ಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಕುರಿತು ಒಡಿಶಾದ ಜಿಆರ್‌ಪಿ ತನಿಖೆ ನಡೆಯುತ್ತಿದೆ” ಎಂದು ಒಡಿಶಾ ಪೊಲೀಸರು ರವಿವಾರ ಟ್ವೀಟ್ ಮಾಡಿದ್ದಾರೆ.

“ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹರಡುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುವುದು” ಎಂದು ಅದು ಹೇಳಿದೆ.

ರೈಲು ದುರಂತ ನಡೆದ ಸ್ಥಳದಲ್ಲಿ ಮಸೀದಿ ಇದೆ ಎಂಬಂತೆ ತಿರುಚಿದ ಚಿತ್ರಗಳನ್ನು ಬಲಪಂಥೀಯರು ಹರಡುತ್ತಿದ್ದು, ಅಪಘಾತ ಶುಕ್ರವಾರ ನಡೆದಿರುವುದನ್ನು ಉಲ್ಲೇಖಿಸಿ ರೈಲು ಅಪಘಾತದ ಹಿಂದೆ ನಿರ್ದಿಷ್ಟ ಸಮುದಾಯದ ಕೈವಾಡ ಇದೆ ಎಂಬರ್ಥದಲ್ಲಿ ಹಲವರು ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Similar News