ಬಾಲಸೋರ್ ರೈಲು ದುರಂತ: ಮೃತರ ಸಂಖ್ಯೆ 275ಕ್ಕೆ ಪರಿಷ್ಕರಣೆ

ಕೆಲವು ಮೃತದೇಹಗಳನ್ನು ಎರಡು ಸಲ ಏಣಿಸಿದ್ದರಿಂದ ಗೊಂದಲ: ಒಡಿಶಾ ಸರಕಾರ

Update: 2023-06-04 16:45 GMT

ಭುವನೇಶ್ವರ: ಒಡಿಶಾದ ಬಾಲಸೋರ್ ನಲ್ಲಿ ಜೂನ್ 2ರಂದು ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ರವಿವಾರ ಪರಿಷ್ಕರಿಸಲಾಗಿದ್ದು 275ಕ್ಕೆ ಇಳಿಸಲಾಗಿದೆ. ಕೆಲವು ಮೃತದೇಹಗಳನ್ನು  ಅವಘಡ ನಡೆದ ಸ್ಥಳದಲ್ಲಿ ಹಾಗೂ ಆನಂತರ ಆಸ್ಪತ್ರೆಯಲ್ಲಿ ಎರಡು ಸಲ ಎಣಿಕೆ ಮಾಡಿದ್ದರಿಂದ ಸಾವಿನ ಸಂಖ್ಯೆಯಲ್ಲಿ ಗೊಂದಲವುಂಟಾಗಿತ್ತೆಂದು ಒಡಿಶಾ ಸರಕಾರದ  ಮುಖ್ಯ ಕಾರ್ಯದರ್ಶಿ ಪಿ.ಕೆ.ಜೇನಾ ತಿಳಿಸಿದ್ದಾರೆ.

ಬಾಲಸೋರ್ ಜಿಲ್ಲಾಧಿಕಾರಿಯವರ ವಿಸ್ತೃತವಾದ ದೃಢೀಕರಣ ಹಾಗೂ ವರದಿಯ ಬಳಿಕ, ರೈಲು ದುರಂತದಲ್ಲಿ ಸಾವನ್ನಪ್ಪಿದವರ ಅಂತಿಮ ಸಂಖ್ಯೆ 275 ಆಗಿದೆಯೆಂದು ಅವರು ಹೇಳಿದ್ದಾರೆ. ಬಾಲಸೋರ್ ಜಿಲ್ಲೆಯ ಬಹನಾಗದಲ್ಲಿ ಶನಿವಾರ ಸಂಭವಿಸಿದ ತ್ರಿವಳಿ ರೈಲು ಅವಘಡದಲ್ಲಿ ಒಟ್ಟು 288 ಮಂದಿ  ಮೃತಪಟ್ಟಿರುವುದಾಗಿ ಶನಿವಾರ ಪ್ರಕಟಿಸಲಾಗಿತ್ತು.

 1175 ಗಾಯಾಳು ಪ್ರಯಾಣಿಕರನ್ನು  ಸೋರೊ, ಬಾಲಸೋರ್, ಭದ್ರಕ್ ಹಾಗೂ ಕಟಕ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರ ಪೈಕಿ793 ಮಂದಿಯನ್ನು  ಬಿಡುಗಡೆಗೊಳಿಸಲಾಗಿದ್ದರೆ, ಉಳಿದ 382 ಮಂದಿ ಇನ್ನೂಚಿಕಿತ್ಸೆ ಪಡೆಯುತ್ತಿದ್ದಾರೆ.  ಒಡಿಶಾ ಸರಕಾರವೇ ಚಿಕಿತ್ಸೆಯ ವೆಚ್ಚಗಳನ್ನು ಭರಿಸುತ್ತಿರುವುದಾಗಿ ಅವರು ತಿಳಿಸಿದರು.

ಈವರೆಗೆ 88 ಮಂದಿಯ ಮೃತದೇಹಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ 78 ಮೃತದೇಹಗಳನ್ನು  ಬಂಧುಗಳಿಗೆ ಹಸ್ತಾಂತರಿಸಲಾಗಿದೆ. 170 ಮೃತದೇಹಗಳ ಗುರುತುಗಳನ್ನು ಬಾಲಸೋರ್ ಜಿಲ್ಲೆಯಲ್ಲಿ ದೃಢಪಡಿಸಲು ಸಾಧ್ಯವಾದ ಕಾರಣ ಅವುಗಳನ್ನು  ಭುವನೇಶ್ವರದ ವಿವಿಧ ಆಸ್ಪತ್ರೆಗಳಿಗೆ ರವಿವಾರ ವರ್ಗಾಯಿಸಲಾಗಿದೆ. ಉಳಿದ 17 ಗುರುತು ಹಚ್ಟಲಾಗದ ಮೃತದೇಹಗಳನ್ನು ಭುವನೇಶ್ವರಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು  ಬಾಲಸೋರ್ ಜಿಲ್ಲಾಧಿಕಾರಿಯವರು ಆರಂಭಿಸಿದ್ದಾರೆ.

ಗುರುತುಹಚ್ಚುವ ಉದ್ದೇಶದಿಂದ ಮೃತದೇಹಗಳ ಛಾಯಾಚಿತ್ರಗಳನ್ನು   ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ  (OSDMA)  ಹಾಗೂ ಭುವನೇಶ್ವರ ಮಹಾನಗರಪಾಲಿಕೆ ನಿಗಮ (BMC)ಯಅಧಿಕೃತ ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆಎಂದು ಜೇನಾ ತಿಳಿಸಿದರು.

ಒಂದು ವೇಳೆ ಮೃತದೇಹಗಳನ್ನು ಗುರುತಿಸಲು  ಸಾಧ್ಯವಾಗದೆ ಇದ್ದಲ್ಲಿ, ಆನಂತರ ವೈದ್ಯಕೀಯ ಹಾಗೂ ಕಾನೂನಾತ್ಮಕ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಅಂತಹ ಮೃತದೇಹಗಳನ್ನು ಗುರುತು ಪತ್ತೆಹಚ್ಚಲು ಡಿಎನ್ಎ ಅಥವಾ ಬೆರಳಚ್ಚು ಪರೀಕ್ಷೆ ನಡೆಸಲಾಗುವುದು ಎಂದವರು ತಿಳಿಸಿದರು. ಭುವನೇಶ್ವರದ ಪ್ರವೇಶ ಪಾಯಿಂಟ್ ಗಳು, ಭುವನೇಶ್ವರ ರೈಲು ನಿಲ್ದಾಣ, ಕಟಕ್ ಬಸ್ ನಿಲ್ದಾಣ, ಎಸ್ಸಿಬಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆ, ಬರಾಮುಂಡಾ ಬಸ್ ನಿಲ್ದಾಣ ಹಾಗೂ ಬಿಜುಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಸ್ಥಾಪಿಸಲಾಗುವುದು. ಸಂತ್ರಸ್ತರ ನೆರವಿಗಾಗಿ ಸಹಾಯವಾಣಿ ಸಂಖ್ಯೆ 1929 ಅನ್ನು ಸಕ್ರಿಯಗೊಳಿಸಲಾಗಿದೆಯೆಂದು ಜೇನಾ ತಿಳಿಸಿದ್ದಾರೆ.

ಬಹನಾಗಾದಲ್ಲಿ ರೈಲು ಹಳಿಗಳ ಮರುಸ್ಥಾಪನೆ ಕಾರ್ಯ ಆರಂಭ: ಸಚಿವ ವೈಷ್ಣವ್

ಎರಡು ಪ್ರಯಾಣಿಕ ರೈಲುಗಳು ಹಾಗೂ  ಒಂದು ಸರಕು ಸಾಗಣೆ ರೈಲು ಸರಣಿ ಅವಘಡಕ್ಕೀಡಾದ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ನಡೆಯುತ್ತಿರುವ ರೈಲು ಹಳಿಗಳ ಮರುಸ್ಥಾಪನೆ ಕಾರ್ಯಗಳನ್ನು  ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರವಿವಾರ ಪರಿಶೀಲಿಸಿದ್ದಾರೆ.

“ಅವಘಡದ ಮೂಲ ಕಾರಣವನ್ನು  ಗುರುತಿಸಲಾಗಿದೆ. ಪ್ರಧಾನಿ ಮೋದಿಯವರು ಶನಿವಾರ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈಲು ಹಳಿಯನ್ನು ಇಂದೇ ಮರುಸ್ಥಾಪಿಸುವ ಕೆಲಸವನ್ನು ನಾವು ಆರಂಭಿಸಿದ್ದೇವೆ. ಸ್ಥಳದಲ್ಲಿದ್ದ ಎಲ್ಲಾ ಮೃತದೇಹಗಳನ್ನು ತೆರವುಗೊಳಿಸಲಾಗಿದೆ.  ಬುಧವಾರ ಬೆಳಗ್ಗಿನೊಳಗೆ ಹಳಿಗಳ ಮರುಸ್ಥಾಪನೆ ಕಾರ್ಯವನ್ನು  ಮುಕ್ತಾಯಗೊಳಿಸುವ ಗುರಿಯನ್ನು ಇರಿಸಿಕೊಂಡಿದ್ದೇವೆ’’ ಎಂದು  ವೈಷ್ಣವ್  ಸುದ್ದಿಗಾರರಿಗೆ ತಿಳಿಸಿದರು.

ಮಗುಚಿಬಿದ್ದ ಬೋಗಿಗಳನ್ನು ಕೂಡಾ ತೆರವುಗಳಿಸಲಾಗಿದೆ ಹಾಗೂ ಇನ್ನೊಂದು ಕಡೆಯಿಂದ ರೈಲ್ವೆ ಹಳಿಯನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿದೆ ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಓ) ಆದಿತ್ಯ ಕುಮಾರ್ ತಿಳಿಸಿದ್ದಾರೆ.

ಅವಘಡ  ಸ್ಥಳದಲ್ಲಿ ರೈಲುಹಳಿಗಳ ಮರುಸ್ಥಾಪನೆ ಕಾರ್ಯವು ಸಮರೋಪಾದಿಯಲ್ಲಿ ನಡೆಯುತ್ತಿದ್ದು,    ರೈಲ್ವೆ ಅಧಿಕಾರಿಗಳು ನಿಕಟವಾಗಿ ನಿಗಾವಿರಿಸಿದ್ದಾರೆಂದು ರೈಲ್ವೆ ಸಚಿವಾಲಯವು  ರವಿವಾರ ಬೆಳಗ್ಗೆ ಟ್ವೀಟ್ ಮಾಡಿದೆ.

‘‘ಅವಘಡದ ಸ್ಥಳದಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಅವಿಶ್ರಾಂತವಾಗಿ  ಕೆಲಸ ಮಾಡುತ್ತಿದ್ದಾರೆ. 7 ಪೊಕ್ಲೇನ್ ಯಂತ್ರಗಳು, 2 ಅವಘಡ ಪರಿಹಾರ ರೈಲುಗಳು ಹಾಗೂ 3-4 ರೈಲ್ವೆ ಹಾಗೂ ರೋಡ್ ಕ್ರೇನ್ಗಳನ್ನು ಹಳಿಗಳ ತ್ವರಿತ ಮರುಸ್ಥಾಪನೆ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ’’ ಎಂದು ರೈಲ್ವೆ ಸಚಿವಾಲಯ ಟ್ವೀಟಿಸಿದೆ.

ರೈಲು ದುರಂತದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ತೆರವು ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆಯ  ಎಂಐ-17 ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ವಾಯುಪಡೆಯ ಪೂರ್ವಕಮಾಂಡ್, ನಾಗರಿಕ ಆಡಳಿತ ಹಾಗೂ ಭಾರತೀ ರೈಲ್ವೆ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

Similar News