ಪ್ರತಿಕೂಲ ಹವಾಮಾನ ಕುರಿತು ಎಚ್ಚರಿಕೆ: ಫೋನ್‌ಗಳಲ್ಲಿ ಎಸ್ಎಂಎಸ್ ಬಳಿಕ ಶೀಘ್ರವೇ ಟಿವಿ ಮತ್ತುರೇಡಿಯೊದಲ್ಲಿ ಲಭ್ಯವಾಗಲಿದೆ

Update: 2023-06-04 17:17 GMT

ಹೊಸದಿಲ್ಲಿ: ಶೀಘ್ರದಲ್ಲಿಯೇ ಟಿವಿ ಪರದೆಗಳು ದೇಶದಲ್ಲಿ ಸನ್ನಿಹಿತ ಹವಾಮಾನ ವೈಪರೀತ್ಯಗಳ ಕುರಿತು ಎಚ್ಚರಿಕೆಯ ಸಂದೇಶಗಳನ್ನು ತೋರಿಸಲಿವೆ ಮತ್ತು ತುರ್ತು ಎಚ್ಚರಿಕೆಗಳಿಗೆ ಅವಕಾಶ ಕಲ್ಪಿಸಲು ರೇಡಿಯೋ ಹಾಡುಗಳ ಪ್ರಸಾರವನ್ನು ಮೊಟಕುಗೊಳಿಸಲಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ವು ಭಾರೀ ಮಳೆ, ಗುಡುಗು-ಸಿಡಿಲು ಮತ್ತು ಉಷ್ಣ ಮಾರುತಗಳ ಕುರಿತು ನಿರ್ಣಾಯಕ ಮಾಹಿತಿಗಳ ಪ್ರಸಾರಕ್ಕಾಗಿ ಮೊದಲ ಹಂತದಲ್ಲಿ ಮೊಬೈಲ್ ಫೋನ್ ಗಳಲ್ಲಿ ಪಠ್ಯ ಸಂದೇಶ (SMS)ಗಳ ರವಾನೆಯನ್ನು ಇತ್ತೀಚಿಗೆ ಆರಂಭಿಸಿದೆ. ಎನ್ ಡಿಎಂಎ ಎರಡನೆಯ ಹಂತದಲ್ಲಿ ವರ್ಷಾಂತ್ಯದ ವೇಳೆಗೆ ನಾಗರಿಕರಿಗೆ ತ್ವರಿತ ಮಾಹಿತಿ ಮತ್ತು ಪ್ರತಿಕೂಲ ಹವಾಮಾನವನ್ನು ಎದುರಿಸಲು ಅವರ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಎಚ್ಚರಿಕೆ ವ್ಯವಸ್ಥೆಯನ್ನು ಟಿವಿ, ರೇಡಿಯೊ ಮತ್ತು ಇತರ ಮಾಧ್ಯಮಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪಠ್ಯ ಸಂದೇಶಗಳಿಗೆ ಮೊದಲು ಎನ್ ಡಿಎಂಎ ‘ನ್ಯಾಷನಲ್ ಡಿಸಾಸ್ಟರ್ ಅಲರ್ಟ್ ಪೋರ್ಟಲ್’ ಮತ್ತು ಮೊಬೈಲ್ ಆ್ಯಪ್ ‘ಸ್ಯಾಚೆಟ್’ ಮೂಲಕ ಇಂತಹ ಮುನ್ನೆಚ್ಚರಿಕೆಗಳನ್ನು ನೀಡುತ್ತಿತ್ತು.

ಭಾರತೀಯ ಹವಾಮಾನ ಇಲಾಖೆ, ಕೇಂದ್ರ ಜಲ ಆಯೋಗದಂತಹ ಮುನ್ನೆಚ್ಚರಿಕೆ ನೀಡುವ ಏಜೆನ್ಸಿಗಳನ್ನು ಸಾಮಾನ್ಯ ವೇದಿಕೆಯಲ್ಲಿ ಒಂದುಗೂಡಿಸಲು ಎನ್ ಡಿಎಂಎ ‘ಕಾಮನ್ ಅಲರ್ಟಿಂಗ್ ಪ್ರೋಟೊಕಾಲ್ ಬೇಸ್ಡ್ ಇಂಟಿಗ್ರೇಟೆಡ್ ಅಲರ್ಟ್ ಸಿಸ್ಟಮ್ ’ನ್ನು ರೂಪಿಸಿದ್ದು, ತಮಿಳುನಾಡಿನಲ್ಲಿ ಯಶಸ್ವಿ ಪ್ರಾಯೋಗಿಕ ಯೋಜನೆಯ ಬಳಿಕ ದೇಶಾದ್ಯಂತ ಮೊದಲ ಹಂತದ ಅನುಷ್ಠಾನಕ್ಕಾಗಿ ಕೇಂದ್ರವು 2021ರಲ್ಲಿ ಅನುಮೋದನೆಯನ್ನು ನೀಡಿತ್ತು.

ಇದು ವಿಶ್ವದಲ್ಲಿ ಅತಿ ದೊಡ್ಡ ಮುನ್ನೆಚ್ಚರಿಕೆ ಕಾರ್ಯಕ್ರಮವಾಗಿದ್ದು,ಜನರು ವಾಟ್ಸ್ಆ್ಯಪ್,ಇ-ಮೇಲ್ ಅಥವಾ ಎಸ್ಎಂಎಸ್ ಗುಂಪುಗಳಿಗೆ ಚಂದಾದಾರರಾಗಬೇಕಿಲ್ಲ,ಅವರು ಸ್ವಯಂಚಾಲಿತವಾಗಿ ಮುನ್ನೆಚ್ಚರಿಕೆಗಳನ್ನು ಪಡೆಯುತ್ತಾರೆ ಎಂದು ಇನ್ನೋರ್ವ ಎನ್ ಡಿಎಂಎ ಅಧಿಕಾರಿ ತಿಳಿಸಿದರು.

ಸ್ಥಳೀಯ ಭಾಷೆ ಸೇರಿದಂತೆ ಎರಡು ಭಾಷೆಗಳಲ್ಲಿ ಸನ್ನಿಹಿತ ಹವಾಮಾನ ವೈಪರೀತ್ಯಗಳ ಕುರಿತು ಮುನ್ನೆಚ್ಚರಿಕೆ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ ಮತ್ತು ಇಂತಹ ಎಚ್ಚರಿಕೆಗಳನ್ನು ಪಡೆದ ಬಳಿಕ ಮೊಬೈಲ್ ಫೋನ್ ಗಳು ಕಂಪಿಸುತ್ತವೆ ಎಂದರು.

ಭಾರತವು ಜಗತ್ತಿನ ಉತ್ತರ ಭಾಗವನ್ನು ಹೊರತುಪಡಿಸಿದರೆ ಕಾಮನ್ ಅಲರ್ಟ್ ಪ್ರೋಟೊಕಾಲ್ ಹೊಂದಿರುವ ಏಕೈಕ ದೇಶವಾಗಿದೆ ಎಂದೂ ಅವರು ತಿಳಿಸಿದರು.

Similar News