ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನೂತನ ಅಧ್ಯಕ್ಷರಾಗಿ ಎಂ.ಐ.ಖಾಲಿದ್ ಸೈಫುಲ್ಲಾ ರಹ್ಮಾನಿ ಆಯ್ಕೆ

Update: 2023-06-05 05:21 GMT

ಇಂದೋರ್, ಜೂನ್. 4: ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷರಾಗಿ ಮಧ್ಯಪ್ರದೇಶದ ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಚಿಂತಕ ಹಾಗೂ ಮಂಡಳಿಯ ಹಿರಿಯ ಸದಸ್ಯ ಎಂ.ಐ.ಖಾಲಿದ್ ಸೈಫುಲ್ಲಾ ರಹ್ಮಾನಿ ಆಯ್ಕೆಯಾಗಿದ್ದಾರೆ.

ಇಂದೋರ್ ನ ಮಾಹುದಲ್ಲಿ ನಡೆದ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮಹಾಸಭೆಯಲ್ಲಿ 5ನೇ ಅಧ್ಯಕ್ಷರನ್ನಾಗಿ ಎಂ.ಐ.ಖಾಲಿದ್ ಸೈಫುಲ್ಲಾ ರಹ್ಮಾನಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮಂಡಳಿಯ ಅಧ್ಯಕ್ಷರಾಗಿದ್ದ ಮೌಲಾನಾ ಮುಹಮ್ಮದ್ ರಾಬೆಅ್ ಹಸನಿ ನದ್ವಿ ಅವರ ನಿಧನದ ಹಿನ್ನೆಲೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು.

ಕಾರ್ಯಕಾರಿ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ ನೂತನ ಅಧ್ಯಕ್ಷರು ಖಾಲಿ ಇರುವ ಪದಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಿದರು.

ನೂತನ ಪದಾಧಿಕಾರಿಗಳ ವಿವರ ಹೀಗಿದೆ...

- ಉಪಾಧ್ಯಕ್ಷರಾಗಿ ಸೈಯದ್ ಸಾದಾತುಲ್ಲಾ ಹುಸೈನಿ (ಅಮೀರ್ , ಜಮಾಅತೆ ಇಸ್ಲಾಮಿ ಹಿಂದ್)
ಡಾ. ಸೈಯದ್ ಶಾ ಖುಸ್ರೋ, ಗುಲ್ಗರ್ಬಾ (ಸಜ್ಜಾದ ನಶೀನ್,   ಗುಲ್ಬರ್ಗಾ ದರ್ಗಾ ಶರೀಫ್)

ಪ್ರಧಾನ ಕಾರ್ಯದರ್ಶಿಗಳಾಗಿ ಮೌಲಾನಾ ಮುಹಮ್ಮದ್ ಫಝಲುರ್ರಹೀಂ ಮುಜದ್ದಿದಿ, ಕಾರ್ಯದರ್ಶಿಗಳಾಗಿ  ಮೌಲಾನಾ   ಎಸ್. ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ (ನಾಝಿಮ್, ನದ್ವತುಲ್ ಉಲಮಾ ಲಕ್ನೋ), ಮೌಲಾನಾ   ಎಸ್. ಅಹ್ಮದ್ ವಲಿ ಫೈಸಲ್ ರಹ್ಮಾನಿ (ಅಮೀರ್ ಇ ಶರೀಅತ್, ಬಿಹಾರ, ಒಡಿಶಾ, ಜಾರ್ಖಂಡ್), ಮೌಲಾನಾ   ಡಾ.ಯಾಸೀನ್ ಅಲಿ ಉಸ್ಮಾನಿ, ಬಡೌನ್, ಯು.ಪಿ. ಅವರನ್ನು ಆಯ್ಕೆ ಮಾಡಲಾಗಿದೆ. 

ಮಂಡಳಿಯ ವಕ್ತಾರರನ್ನಾಗಿ ಡಾ.ಎಸ್.ಕ್ಯೂ.ಆರ್.ಇಲ್ಯಾಸ್ ಹಾಗೂ  ಕಮಾಲ್ ಫರೂಕಿ ಅವರನ್ನು ಸಹ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

ಸಭೆಯ ಆರಂಭದಲ್ಲಿ ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು.

"ಒಡಿಶಾದ ಬಾಲ್ಸೋರ್‌ನಲ್ಲಿ 288 ಅಮಾಯಕ ಪ್ರಯಾಣಿಕರ ಸಾವಿಗೆ ಕಾರಣವಾದ ಭೀಕರ ರೈಲು ದುರಂತದಿಂದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಆಘಾತಕ್ಕೊಳಗಾಗಿದೆ. ಗಂಭೀರವಾಗಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲು ಮಂಡಳಿಯು ಪ್ರಾರ್ಥಿಸಿದೆ, ಮತ್ತು ನೊಂದ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದೆ'' ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Similar News