ಮಹಾರಾಷ್ಟ್ರದಲ್ಲಿ ಲೋಕಸಭೆ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ, ಶಿವಸೇನೆ ಜಂಟಿ ಸ್ಪರ್ಧೆ:ಏಕನಾಥ್ ಶಿಂಧೆ

Update: 2023-06-05 07:30 GMT

ಮುಂಬೈ: ಮುಂಬರುವ 2024 ರ ಲೋಕಸಭೆ ಚುನಾವಣೆ, ರಾಜ್ಯ ವಿಧಾನಸಭೆ ಹಾಗೂ  ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಶಿವಸೇನೆ ಹಾಗೂ  ಬಿಜೆಪಿ ಜಂಟಿಯಾಗಿ ಎದುರಿಸಲು ನಿರ್ಧರಿಸಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde)ಸೋಮವಾರ ಘೋಷಿಸಿದ್ದಾರೆ.

ಶಿಂಧೆ, ಉಪ ಮುಖ್ಯಮಂತ್ರಿ ಹಾಗೂ  ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಗೃಹ ಸಚಿವ ಅಮಿತ್ ಶಾ ನಡುವೆ ಹೊಸದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಶಿಂಧೆ, "ರಾಜ್ಯದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ (ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ) ಶಿವಸೇನೆ ಹಾಗೂ  ಬಿಜೆಪಿ ಜಂಟಿಯಾಗಿ ಸ್ಪರ್ಧಿಸಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಶಿವಸೇನೆ-ಬಿಜೆಪಿ ಮೈತ್ರಿ "ಬಲವಾಗಿದೆ" ಎಂದು ಶಿಂಧೆ ಹೇಳಿದರು.

" ಅಭಿವೃದ್ಧಿಯ ಓಟವನ್ನು ಮುಂದುವರಿಸಲು ಭವಿಷ್ಯದಲ್ಲಿ ನಾವು ಒಟ್ಟಾಗಿ ಚುನಾವಣೆಗಳನ್ನು ಎದುರಿಸುತ್ತೇವೆ ಹಾಗೂ  ಬಹುಮತದೊಂದಿಗೆ ಮಹಾರಾಷ್ಟ್ರವನ್ನು ಎಲ್ಲಾ ಕ್ಷೇತ್ರಗಳಲ್ಲಿ ದೇಶದ ಮೊದಲ ರಾಜ್ಯವನ್ನಾಗಿ ಮಾಡಲಿದ್ದೇವೆ "  ಎಂದು ಶಿಂಧೆ ಹೇಳಿದರು.

ಶಾ ಅವರೊಂದಿಗಿನ ಸಭೆಯಲ್ಲಿ ಕೃಷಿ ಮತ್ತು ಸಹಕಾರ ಸೇರಿದಂತೆ ರಾಜ್ಯದ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ರಾಜ್ಯದಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಈಗ ಸುವ್ಯವಸ್ಥಿತಗೊಳಿಸಲಾಗಿದೆ ಮತ್ತು ಅವು ಪೂರ್ಣಗೊಳ್ಳುವ ಹಾದಿಯಲ್ಲಿವೆ ಎಂದು ಶಿಂಧೆ ಹೇಳಿದರು.

Similar News