ಸರಕಾರಿ ಕೆಲಸಕ್ಕೆ ಮರಳಿದ್ದೇನೆ, ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ: ಸಾಕ್ಷಿ ಮಲಿಕ್ ಸ್ಪಷ್ಟನೆ

Update: 2023-06-05 10:36 GMT

ಹೊಸದಿಲ್ಲಿ: ಕುಸ್ತಿಪಟುಗಳ ಪ್ರತಿಭಟನೆಯಿಂದ ತಾನು ಹಿಂದೆ ಸರಿದಿರುವ ವರದಿಯನ್ನು ಕುಸ್ತಿ ತಾರೆ ಸಾಕ್ಷಿ ಮಲಿಕ್ ಸೋಮವಾರ ನಿರಾಕರಿಸಿದ್ದಾರೆ.  

ಕುಸ್ತಿಪಟುಗಳು ಪ್ರತಿಭಟನೆಯಿಂದ  ಹಿಂದೆ ಸರಿದಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಇದನ್ನು ನಿರಾರಿಸಿದ ಸಾಕ್ಷಿ, ತಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ ಆದರೆ ಕೇವಲ ತನ್ನ ಸರಕಾರಿ ಕೆಲಸಕ್ಕೆ ಮರಳಿದ್ದೇನೆ ಎಂದು ಸಾಕ್ಷಿ ಮಲಿಕ್ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

“ಈ ಸುದ್ದಿ ಸಂಪೂರ್ಣವಾಗಿ ತಪ್ಪು. ನ್ಯಾಯಕ್ಕಾಗಿ ಹೋರಾಟದಲ್ಲಿ ನಾವೇನೂ ಹಿಂದೆ ಸರಿದಿಲ್ಲ, ನಾವೂ ಹಿಂದೆ ಸರಿಯುವುದಿಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿ ಹಬ್ಬಿಸಬೇಡಿ’’ಎಂದು 30ರ ಹರೆಯದ ಮಲಿಕ್ ಟ್ವೀಟಿಸಿದ್ದಾರೆ.

"ಚಳವಳಿಯಿಂದ ಹಿಂದೆ ಸರಿದಿರುವ  ಸುದ್ದಿ ಕೇವಲ ವದಂತಿಯಾಗಿದೆ. ನಮಗೆ ಹಾನಿ ಮಾಡಲು ಈ ಸುದ್ದಿ ಹಬ್ಬಿಸಲಾಗುತ್ತಿದೆ. ನಾವು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ ಅಥವಾ ಚಳವಳಿಯನ್ನು ಹಿಂತೆಗೆದುಕೊಂಡಿಲ್ಲ. ಮಹಿಳಾ ಕುಸ್ತಿಪಟುಗಳು ಎಫ್‌ಐಆರ್‌ ದಾಖಲಿಸಿದ್ದಾರೆ ಎಂಬ ಸುದ್ದಿಯೂ ಸುಳ್ಳು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ' ಎಂದು ಪುನಿಯಾ ಟ್ವೀಟ್ ಮಾಡಿದ್ದಾರೆ.

ಖ್ಯಾತ ಕುಸ್ತಿಪಟುಗಳಾದ  ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ  ಬಜರಂಗ್ ಪುನಿಯಾ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ರೈಲ್ವೇಯಲ್ಲಿ ಉದ್ಯೋಗದಲ್ಲಿರುವ ಮೂವರೂ ಕುಸ್ತಿಪಟುಗಳು ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ.

ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ  ಬಜರಂಗ್ ಪುನಿಯ  ಅವರು ಬಾಲಕಿ ಸೇರಿದಂತೆ  ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆದಾಗ್ಯೂ, ಇತ್ತೀಚಿನ ವರದಿಗಳು ಈ ಮೂವರು ಈಗ ಪ್ರತಿಭಟನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಮತ್ತು ಆಯಾ ರೈಲ್ವೆ ಉದ್ಯೋಗಗಳಿಗೆ ಮರಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Similar News