ಜೈಲಿಗೆ ಹಾಕಲು ಚಕ್ರವರ್ತಿ ಸೂಳಿಬೆಲೆ ಭಯೋತ್ಪಾದಕ ಅಲ್ಲ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜೂ.5: ಚಕ್ರವರ್ತಿ ಸೂಳಿಬೆಲೆ ಅವರನ್ನು ಜೈಲಿಗೆ ಹಾಕುತ್ತೇವೆ ಎಂಬ ಹೇಳಿರುವ ಸಚಿವ ಎಂ.ಬಿ. ಪಾಟೀಲ್ ತಮ್ಮ ಹೇಳಿಕೆಯನ್ನು ಪುನರ್ ಪರಿಶೀಲನೆ ಮಾಡಬೇಕು. ಸೂಳಿಬೆಲೆ ರಾಷ್ಟ್ರಭಕ್ತರ ಸಾಲಿಗೆ ಸೇರು ವವರೇ ಹೊರತು ಭಯೋತ್ಪಾದಕ ಅಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರಲ್ಲಿ ರಾಷ್ಟ್ರ ಭಕ್ತಿ ಹೆಚ್ಚಿಸುವ, ರಾಷ್ಟ್ರೀಯತೆಗೆ ಒತ್ತು ಕೊಡುತ್ತಿರುವ ಸೂಳಿಬೆಲೆ ಅವರನ್ನು ವಿನಾಕಾರಣ ಜೈಲಿಗೆ ಹಾಕುತ್ತೇವೆ ಎಂಬ ಅಬ್ಬರದ ಮಾತು ಗಳನ್ನು ಪ್ರತಿಪಕ್ಷವಾಗಿ ಬಿಜೆಪಿ ಗಂಭೀರವಾಗಿ ಪರಿಗಣಿಸುತ್ತದೆ. ಸೂಲಿಬೆಲೆಯನ್ನು ವಿನಾಕರಣ ಜೈಲಿಗೆ ಹಾಕುತ್ತೇವೆ ಎಂದು ಶಕ್ತಿ ಪ್ರದರ್ಶನ ಮಾಡಿದರೆ ಬಿಜೆಪಿ ತೀವ್ರ ಹೋರಾಟ ಮಾಡಿ ಅವರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡುತ್ತದೆ ಎಂದರು.
ಕುಸ್ತಿಪಟುಗಳ ಪ್ರತಿಭಟನೆ ಹಾಗೂ ಅದರ ಹಿಂದೆ ಇರುವ ತಾರ್ಕಿಕವಾದ ಅಂಶವನ್ನು ಕೇಂದ್ರ ಸರಕಾರ ಗಮನಿಸಿದೆ. ಒಟ್ಟಾರೆಯಾಗಿ ಕೇಂದ್ರ ಸರಕಾರ ಸಮಸ್ಯೆಗಳನ್ನು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಸರಿಯಾದ ಸಮಯಕ್ಕೆ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. ಅದೇ ರೀತಿ ಪ್ರತಿಭಟನೆಗೆ ವಿದೇಶಿ ನೆರವಿನ ಹಿನ್ನೆಲೆಯ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಪಶು ಸಂಗೋಪನಾ ಸಚಿವರು ಗೋಹತ್ಯೆ ಮಾಡಿದರೆ ಏನಾಗುತ್ತದೆ ಎಂಬ ಉದ್ಧಟತನ ಹೇಳಿಕೆ ನೀಡಿದ್ದಾರೆ. ಗೋಹತ್ಯೆ ನಿಷೇಧ ಕಾಯಿದೆಯನ್ನು ರೈತರ ಪರವಾಗಿ ಮತ್ತು ಸಾಧು ಸಂತರ ಅಭಿಪ್ರಾಯ ಗೌರವಿಸಲು ಮತ್ತು ಹಿಂದು ಧರ್ಮದಲ್ಲಿ ಪೂಜನೀಯವಾಗಿರುವ ಗೋವುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವುದು. ಒಂದು ವೇಳೆ ರಾಜ್ಯ ಸರಕಾರ ಈ ಕಾಯಿದೆಗೆ ತಿದ್ದುಪಡಿ ಮಾಡಿ ಗೋವುಗಳ ಮಾರಣಾಹೋಮ ಮಾಡುವ ಪರಿಸ್ಥಿತಿ ನಿರ್ಮಿಸಿದರೆ ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.