ಸಿಜೆಐ ವಿರುದ್ಧವೇ ಅಪಪ್ರಚಾರಕ್ಕೆ ನಿಂತವರು

Update: 2023-06-05 13:03 GMT

ಸಂವಿಧಾನದಲ್ಲಿಲ್ಲದ ಆಚರಣೆಗಳು ಸಂಸತ್ ಪ್ರವೇಶಿಸಿವೆ. ಪ್ರಜಾಪ್ರಭುತ್ವ ದೇಶ ಕಟ್ಟುವ ಕನಸು ಕಂಡು, ಸ್ವಾತಂತ್ರ್ಯ ಹೋರಾಟ ನಡೆಸಿ, ಪ್ರಾಣ ತೆತ್ತು, ಸಂವಿಧಾನ ರಚಿಸಿ, ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ದೇಶ ಕಟ್ಟಿದವರಿದ್ದ ಜಾಗದಲ್ಲಿ ಅರ್ಚಕರಿದ್ದಾರೆ. ಸಂಸತ್ತಿನಲ್ಲಿರಬೇಕಾದ ಆದಿವಾಸಿ ಮಹಿಳಾ ರಾಷ್ಟ್ರಪತಿ ಹೊರಗಿದ್ದಾರೆ. ಇದುವರೆಗೆ ಯಾರಿಗೂ ಗೊತ್ತಿಲ್ಲದ ದಂಡವೊಂದು ಸಂಸತ್ತಿನಲ್ಲಿ ಸ್ಪೀಕರ್ ಪಕ್ಕದಲ್ಲೇ ಸ್ಥಾನ ಪಡೆದಿದೆ. ಸಂವಿಧಾನಕ್ಕೆ ಸಂಬಂಧವೇ ಇಲ್ಲದ ಆಚರಣೆಗಳು ಶುರುವಾಗಿವೆ. ರಾಜನ ಪಟ್ಟಾಭಿಷೇಕದಂತೆ ಸರಕಾರಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಆಂತರಿಕ ಶತ್ರುಗಳು...

ವಿದೇಶಿ ಏಜೆಂಟ್ಗಳು...

ದೇಶದ ಹೆಸರಿಗೆ ಕಳಂಕ ತರುವವರು...

ಇವೆಲ್ಲವೂ ಈ ಹಿಂದೆ ಬಲಪಂಥೀಯ ಟ್ರೋಲ್ಗಳು ಮಾನವಹಕ್ಕು ಹೋರಾಟಗಾರ ರಿಗೆ, ಅಲ್ಪಸಂಖ್ಯಾತರಿಗೆ, ಬುದ್ಧಿಜೀವಿಗಳಿಗೆ, ವಿಪಕ್ಷಗಳ ನಾಯಕರಿಗೆ, ಸೌಹಾರ್ದ ಬಯಸುವ ಭಾರತೀಯರಿಗೆ ಕಟ್ಟುತ್ತಿದ್ದ ಹಣೆಪಟ್ಟಿಗಳು.

2014ರಿಂದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇವೆಲ್ಲವೂ ಮಾಮೂಲಾಗಿಬಿಟ್ಟಿದೆ. ಪುರಾತನ ಕಾಲದಲ್ಲಿ ರಾಜರು ಬಳಸುತ್ತಿದ್ದ ರಾಜದಂಡ ತಂದು ಪ್ರಜಾಪ್ರಭುತ್ವ ದೇಶದ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿ, ವೈದಿಕ ಆಚರಣೆಗಳನ್ನು ನಡೆಸಿ ದೇಶವನ್ನು ಮತ್ತೆ ಪುರಾತನ ಕಾಲದ ಕಡೆಗೆ ಕೊಂಡೊಯ್ಯುತ್ತಿರುವ ಇಂದಿನ ದಿನಗಳಲ್ಲಿ ಬಲಪಂಥೀಯ ಟ್ರೋಲ್ಗಳ ಈಗಿನ ಪ್ರಮುಖ ಟಾರ್ಗೆಟ್, ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ (ಸಿಜೆಐ) ಜಸ್ಟಿಸ್ ಡಿ.ವೈ. ಚಂದ್ರಚೂಡ್.

ಪ್ರಜಾಪ್ರಭುತ್ವದ ಪರ ಗಟ್ಟಿ ಧ್ವನಿಯಾಗಿರುವ, ಪ್ರಭುತ್ವವನ್ನು ಕಟು ಮಾತುಗಳಿಂದ ಪ್ರಶ್ನಿಸುವ ಚಂದ್ರಚೂಡ್ ಅವರನ್ನು ದೇಶದ ಆಂತರಿಕ ಶತ್ರು, ವಿದೇಶಿ ಏಜೆಂಟ್, ಪ್ರಜಾ ಪ್ರಭುತ್ವಕ್ಕೆ ಬೆದರಿಕೆಯಾಗಿರುವವರು ಎಂದು ಬಲಪಂಥೀಯ ಟ್ರೋಲ್ಗಳು ನಿರಂತರ ಪ್ರಚಾರ ನಡೆಸುತ್ತಿದೆ ಎನ್ನುವ ಆಘಾತಕಾರಿ ವರದಿ ಬಹಿರಂಗಗೊಂಡಿದೆ.

ಮಿಶಿಗನ್ ವಿವಿಯ ಸ್ಕೂಲ್ ಆಫ್ ಇನ್ಫರ್ಮೇಶನ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಜಯಜೀತ್ ಪಾಲ್ ಮತ್ತು ಸಂಶೋಧಕರಾದ ಶೆರಿಲ್ ಅಗರವಾಲ್ ಸಿದ್ಧಪ ಡಿಸಿದ ಈ ವರದಿ ಬಲಪಂಥೀಯರ ವಿಷ ವರ್ತುಲದ ಹಲವು ಕಟು ಸತ್ಯಗಳನ್ನು ಬಯಲು ಮಾಡಿದೆ. ಈ ಎಲ್ಲ ಟ್ರೋಲ್ಗಳ ಹಿಂದೆ ಇರುವುದು ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯರು. ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವದ ಪರವಾಗಿ ಕೆಲಸ ಮಾಡುವ ಯಾರೇ ಆಗಿದ್ದರೂ ಈ ಟ್ರೋಲ್ಗಳು ಅವರನ್ನು ಗುರಿ ಮಾಡುತ್ತವೆ. ಅದಕ್ಕೆ ದೇಶದ ಸಿಜೆಐ ಕೂಡ ಹೊರತಾಗಿಲ್ಲ.

ಅಂದರೆ ಟ್ರೋಲ್ ಮಾಡುವ ಈ ವ್ಯವಸ್ಥೆ ಈಗ ಬಹುತೇಕ ಒಂದು ವೃತ್ತವನ್ನು ಪೂರ್ಣ ಗೊಳಿಸಿದೆ. ತೀರಾ ದುರ್ಬಲರನ್ನು, ಬೀದಿ ಬದಿ ಹೋರಾಟಗಾರರನ್ನು, ಅಲ್ಪಸಂಖ್ಯಾತ ರನ್ನು ಟ್ರೋಲ್ ಮಾಡುತ್ತಿದ್ದ ಈ ಅವಹೇಳನ ಪಡೆ, ಈಗ ದೇಶದ ಮುಖ್ಯ ನ್ಯಾಯಾಧೀಶರನ್ನೇ ಗುರಿ ಮಾಡುವಲ್ಲಿಗೆ ಬಂದು ತಲುಪಿದೆ. ದೇಶದ ನಿಕಟಪೂರ್ವ ಕಾನೂನು ಸಚಿವರೇ ಮಾಜಿ ನ್ಯಾಯಾಧೀಶರುಗಳನ್ನು ಭಾರತ ವಿರೋಧಿ ಗ್ಯಾಂಗ್ ಎಂದು ಜರೆದದ್ದನ್ನು ಈ ದೇಶ ನೋಡಿದೆ. ನ್ಯಾ. ಚಂದ್ರಚೂಡ್ ಅವರ ವಿರುದ್ಧ ನಡೆಸಲಾಗುವ ಅಪಪ್ರಚಾರಗಳು ಏನು ಮತ್ತು ಅವರನ್ನೇ ಗುರಿ ಮಾಡಲು ಕಾರಣ ಏನು ಎಂಬುದು ಗೊತ್ತಾಗಬೇಕಾದರೆ ಮೊದಲು ಅವರ ಬಗ್ಗೆ ಸ್ವಲ್ಪತಿಳಿಯಬೇಕು.

ದೇಶದ 50ನೇ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರಜಾಪ್ರಭುತ್ವದ ಪರ ಧ್ವನಿಯಾಗಿ ಹೆಸರಾದವರು. ಸರಕಾರ, ವ್ಯವಸ್ಥೆ, ಆಡಳಿತವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವಕ್ಕೆ ಅಗತ್ಯ ಎನ್ನುವುದನ್ನು ಒತ್ತಿ ಹೇಳಿದವರು. ಸರಕಾರವನ್ನು ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ ಕಟ್ಟಿ ಜೈಲಿಗಟ್ಟುವ, ಸಾಂವಿಧಾನಿಕ ಸಂಸ್ಥೆಗಳು, ತನಿಖಾ ಏಜೆನ್ಸಿಗಳು ಪ್ರಭುತ್ವದ ಕಾಲಡಿ ಬಿದ್ದಿರುವ ಪರಿಸ್ಥಿತಿಯಲ್ಲಿರುವ ದೇಶದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳುವ ಈ ಮಾತುಗಳು ದೇಶದ ಜನರ ಪಾಲಿಗೆ ಆಶಾಕಿರಣವಾಗಿ ಕಂಡಿವೆ.

ದೇಶದಲ್ಲಿ ಸಿಎಎ, ಎನ್ಆರ್ಸಿ ಹೋರಾಟ ನಡೆದಾಗ ತಮ್ಮ ಹಕ್ಕುಗಳನ್ನು ಕೇಳಿ ಬೀದಿಗಿಳಿದಿದ್ದವರಿಗೆ, ಆ ಹೋರಾಟಕ್ಕೆ ಬೆಂಬಲ ಸೂಚಿಸಿದ ಚಿಂತಕರು, ಹೋರಾಟ ಗಾರರು ಮತ್ತು ಸಾಮಾನ್ಯ ಜನರಿಗೆ ದೇಶವಿರೋಧಿ ಹಣೆಪಟ್ಟಿ ಕಟ್ಟಲಾಗಿತ್ತು.

ಇದೇ ಸಂದರ್ಭ ಹೇಳಿಕೆ ನೀಡಿದ್ದ ಜಸ್ಟಿಸ್ ಚಂದ್ರಚೂಡ್ ಅಸಮ್ಮತಿಯು ಪ್ರಜಾ ಪ್ರಭುತ್ವದ ರಕ್ಷಾ ಕವಚವಾಗಿದ್ದು, ಅಸಮ್ಮತಿಗೆ ದೇಶವಿರೋಧಿ ಹಣೆಪಟ್ಟಿ ಕಟ್ಟುವುದು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ದೇಶದ ಬದ್ಧತೆಯ ಹೃದಯಕ್ಕೆ ಇರಿದ ಹಾಗೆ ಎಂದಿದ್ದರು. ಶಬರಿಮಲೆ ಪ್ರಕರಣದಲ್ಲಿ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆ ಎಂದು ಹೇಳಿದ್ದರು.

2018ರ ಐತಿಹಾಸಿಕ ತೀರ್ಪಿನಲ್ಲಿ ಡಿ.ವೈ. ಚಂದ್ರಚೂಡ್ ಅವರ ಪೀಠ, ಹಾದಿಯಾ ಶಫಿನ್ ಜಹಾನ್ ವಿವಾಹವನ್ನು ಅಸಿಂಧು ಎಂದು ಘೋಷಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು. ವಿವಾಹ ಮತ್ತು ಧರ್ಮವನ್ನು ಬದಲಾಯಿಸುವ ಬಗ್ಗೆ ನಿರ್ಧರಿಸುವ ಸ್ವಾತಂತ್ರವು ಖಾಸಗಿತನ ಮತ್ತು ಸ್ವಾತಂತ್ರಗಳ ಹಕ್ಕುಗಳಿಗೆ ಸಂಬಂಧಿಸಿದ್ದು ಎಂದು ಪೀಠ ಹೇಳಿತ್ತು.

ಇದಿಷ್ಟು ಮಾತ್ರವಲ್ಲ, ಇನ್ನೂ ಹಲವಾರು ಪ್ರಕರಣಗಳಲ್ಲಿ ಪ್ರಜಾಪ್ರಭುತ್ವದ ಪರ ನಿಂತ ವರು ನ್ಯಾ. ಚಂದ್ರಚೂಡ್. ಈ ಎಲ್ಲ ಪ್ರಕರಣಗಳನ್ನು ಗಮನಿಸಿದಾಗ ಎಲ್ಲದರಲ್ಲೂ ಸಂಘ ಪರಿವಾರ, ಬಲಪಂಥೀಯ ಪ್ರೇರಿತ ಶಕ್ತಿಗಳ ಅಪಪ್ರಚಾರವೇ ಎದ್ದು ಕಾಣುತ್ತದೆ. ಅದು ಸಿಎಎ ಹೋರಾಟವಾಗಿರಲಿ, ಹಾದಿಯಾ ಪ್ರಕರಣವಾಗಿರಲಿ ಬಲಪಂಥೀಯ ಟ್ರೋಲ್ ಪಡೆ ನಿರಂತರ ಅಪಪ್ರಚಾರದ ಅಭಿಯಾನವನ್ನೇ ನಡೆಸಿತ್ತು. ಹಾದಿಯಾ ಪ್ರಕರಣವನ್ನು ಲವ್ ಜಿಹಾದ್ ಎಂದು ಪ್ರಚಾರ ಮಾಡಿದ್ದರೆ, ಸಿಎಎ ಹೋರಾಟಗಾರರನ್ನು ದೇಶದ್ರೋಹಿಗಳು ಎಂದಿದ್ದವು.

ಆದರೆ ಇಲ್ಲಿ ಪ್ರಭುತ್ವವನ್ನು ಪ್ರಶ್ನಿಸುವುದು ಅಪರಾಧವಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿ, ಈ ಟ್ರೋಲ್ಗಳ ಬಾಯಿ ಮುಚ್ಚಿಸಿದವರು ನ್ಯಾ. ಚಂದ್ರಚೂಡ್. ಈ ಎಲ್ಲ ಕಾರಣ ಗಳಿಂದ ಈಗ ಬಲಪಂಥೀಯ ಟ್ರೋಲ್ಗಳ ಪ್ರಮುಖ ಗುರಿಯಾಗಿದ್ದಾರೆ.

ನ್ಯಾ.ಚಂದ್ರಚೂಡ್ ವಿರುದ್ಧ ಈ ರೀತಿಯ ಅಭಿಯಾನಕ್ಕೆ ಇಂಬು ನೀಡುತ್ತಿರುವವರಲ್ಲಿ ಪ್ರಮುಖರು ಇಸ್ಕಾನ್ ವಕ್ತಾರ ರಾಧಾರಮಣ ದಾಸ್. ಜೊತೆಗೆ ರಾಮ್ಪ್ರಸಾದ್ ಎನ್ನುವ ಹ್ಯಾಂಡಲ್ ಇರುವ ಇನ್ನೊಂದು ಟ್ವಿಟರ್ ಖಾತೆ. ಇದನ್ನು ಸ್ವತಃ ದೇಶದ ಪ್ರಧಾನಿ ಮೋದಿಯವರೇ ಫಾಲೋ ಮಾಡುತ್ತಿದ್ದಾರೆ. ಇನ್ನೊಬ್ಬ ಮೋದಿ ಪರ ವೆಬ್ಸೈಟ್ ಓಪ್ ಇಂಡಿಯಾದ ಅಂಕಣಕಾರ ಅಭಿಜಿತ್ ಅಯ್ಯರ್ ಮಿತ್ರಾ. ಸಿಜೆಐ ಬಗ್ಗೆ ಈ ಹಿಂದೆ ಟ್ವೀಟ್ ಮಾಡಿದ್ದ ರಾಮ್ ಪ್ರಸಾದ್, ''ದೇಶದಲ್ಲಿ ಹಲವು ವಿದೂಷಕರಿದ್ದಾರೆ. ಹೈಡ್ರೋ ಪವರ್ ಪ್ಲಾಂಟ್ಗಳು ನೀರಿನ ಶಕ್ತಿಯನ್ನೇ ತೆಗೆಯುತ್ತದೆ ಎಂದು ಹೇಳಿದವರಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್ ಅಂದರೆ ಎಲ್ಲ ಡೇಟಾಗಳು ಮೋಡ ಗಳಿಗೆ ಹೋಗುವುದು ಅನ್ನುವವರೂ ಇದ್ದಾರೆ. ಕರೆನ್ಸಿ ನೋಟುಗಳಲ್ಲಿ ಮೈಕ್ರೋಚಿಪ್ ಇದೆ ಎನ್ನುವವರೂ ಇದ್ದಾರೆ. ಆದರೆ ಈಗಿನ ಮುಖ್ಯ ನ್ಯಾಯಮೂರ್ತಿಗಳು ಮಾತ್ರ ಎಲ್ಲರಿಗಿಂತ ದೊಡ್ಡ ವಿದೂಷಕ'' ಎಂದು ಟ್ವೀಟ್ ಮಾಡುತ್ತಾನೆ.

ಇನ್ನೊಮ್ಮೆ ಸಿಜೆಐ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಇದೇ ರಾಮ್ ಪ್ರಸಾದ್, ''ರಾಜಕೀಯ,ಆಡಳಿತಶಾಹಿ ಅಥವಾ ನ್ಯಾಯಾಂಗದಲ್ಲಿ ಇಷ್ಟೊಂದು ಪ್ರಮುಖ ಸ್ಥಾನದಲ್ಲಿರುವ ಇದಕ್ಕಿಂತ ದೊಡ್ಡ ಮೂರ್ಖನನ್ನು ನಾನು ಕಂಡಿಲ್ಲ'' ಎಂದು ನೇರವಾಗಿ ಹೇಳುತ್ತಾನೆ.

ಸ್ವತಃ ಪ್ರಧಾನಿಯೇ ಫಾಲೋ ಮಾಡುತ್ತಿರುವ ವ್ಯಕ್ತಿ ದೇಶದ ಮುಖ್ಯ ನ್ಯಾಯಮೂರ್ತಿ ಬಗ್ಗೆ ಮಾಡಿರುವ ಟ್ವೀಟ್ಗಳು ಇವು. ಆದರೆ ಆತನ ವಿರುದ್ಧ ಯಾವ ಪ್ರಕರಣವೂ ದಾಖ ಲಾಗುವುದಿಲ್ಲ. ನ್ಯಾಯಾಂಗ ನಿಂದನೆಯೂ ಆಗುವುದಿಲ್ಲ. ಪ್ರಧಾನಿ ಆತನನ್ನು ಅನ್ ಫಾಲೋ ಮಾಡುವುದಿಲ್ಲ.

ನ್ಯಾ.ಚಂದ್ರಚೂಡ್ ಅವರನ್ನು ಮುಖ್ಯವಾಗಿ ಹಿಂದೂ ವಿರೋಧಿ ಎಂದು ಪ್ರಚಾರ ಮಾಡ ಲಾಗುತ್ತಿದೆ ಎನ್ನುವುದನ್ನೂ ಈ ವರದಿ ಹೇಳಿದೆ. ಈ ಹಿಂದೆ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೇರಿದಾಗ ವಿರೋಧ ಪಕ್ಷಗಳಿಗಾಗಲೀ, ಜನರಿಗಾಗಲಿ ಈ ಪ್ರಜಾಪ್ರಭುತ್ವ ದೇಶದ ಸ್ವರೂಪ ಬದಲಿಸಲು ಯಾರಿಗೂ ಸಾಧ್ಯವಿಲ್ಲ. ಸಾಂವಿಧಾನಿಕ ಸಂಸ್ಥೆಗಳು, ನ್ಯಾಯಾಲಯಗಳು ರಾಜಿಯಾಗುವುದಿಲ್ಲ. ಸಂವಿಧಾನ ಬದಲಿಸಲು ಸಾಧ್ಯವಾಗುವುದಿಲ್ಲ ಎನ್ನುವ ಬಲವಾದ ನಂಬಿಕೆ ಇತ್ತು. ಆದರೆ ಈಗ ಭಾರತ ಸಾಕಷ್ಟು ಬದಲಾಗಿದೆ.

ಸಂವಿಧಾನದಲ್ಲಿಲ್ಲದ ಆಚರಣೆಗಳು ಸಂಸತ್ ಪ್ರವೇಶಿಸಿವೆ. ಪ್ರಜಾಪ್ರಭುತ್ವ ದೇಶ ಕಟ್ಟುವ ಕನಸು ಕಂಡು, ಸ್ವಾತಂತ್ರ್ಯ ಹೋರಾಟ ನಡೆಸಿ, ಪ್ರಾಣ ತೆತ್ತು, ಸಂವಿಧಾನ ರಚಿಸಿ, ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ದೇಶ ಕಟ್ಟಿದವರಿದ್ದ ಜಾಗದಲ್ಲಿ ಅರ್ಚಕರಿದ್ದಾರೆ. ಸಂಸತ್ತಿನಲ್ಲಿರಬೇಕಾದ ಆದಿವಾಸಿ ಮಹಿಳಾ ರಾಷ್ಟ್ರಪತಿ ಹೊರಗಿದ್ದಾರೆ. ಇದುವರೆಗೆ ಯಾರಿಗೂ ಗೊತ್ತಿಲ್ಲದ ದಂಡವೊಂದು ಸಂಸತ್ತಿನಲ್ಲಿ ಸ್ಪೀಕರ್ ಪಕ್ಕದಲ್ಲೇ ಸ್ಥಾನ ಪಡೆದಿದೆ. ಸಂವಿಧಾನಕ್ಕೆ ಸಂಬಂಧವೇ ಇಲ್ಲದ ಆಚರಣೆಗಳು ಶುರುವಾಗಿವೆ. ರಾಜನ ಪಟ್ಟಾಭಿಷೇಕ ದಂತೆ ಸರಕಾರಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ರಾಜದಂಡಕ್ಕೆ ದೀರ್ಘದಂಡ ಹಾಕಿದ ಪ್ರಧಾನಿಯ ವೀಡಿಯೊ ನೇರಪ್ರಸಾರ ಆಗುತ್ತಿದ್ದಾಗಲೇ ದೇಶಕ್ಕೆ ಹೆಮ್ಮೆ ತಂದ ಹೆಣ್ಣುಮಕ್ಕಳನ್ನು ನ್ಯಾಯ ಕೇಳಿದ ತಪ್ಪಿಗೆ ರಸ್ತೆಗೆ ಎಸೆಯಲಾಗಿದೆ. ತ್ರಿವರ್ಣ ಧ್ವಜ ಹಿಡಿದು ಬೀದಿಗೆ ಬಿದ್ದ ಕುಸ್ತಿಪಟುಗಳು ಕಣ್ಣೀರಿ ಡುತ್ತಿದ್ದರೆ ಪ್ರಧಾನಿ ರಾಜದಂಡ ಹಿಡಿದು ನಿಂತಿದ್ದಾರೆ. ಮತ್ತೊಂದು ಕಡೆ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬಿಜೆಪಿ ಸಂಸದನ ಪರ ಅಯೋಧ್ಯೆಯಲ್ಲಿ ಜಾಥಾ ನಡೆಸಲು ಸಂತರ ಗುಂಪು ಸಿದ್ಧವಾಗಿದೆ. ಬಿಜೆಪಿ ನಾಯಕರೂ ಇದಕ್ಕೆ ಕೈಜೋಡಿಸಿದ್ದಾರೆ ಎನ್ನುವ ಸುದ್ದಿ ಇದೆ. ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಹಾರ ಹಾಕಿ ಸನ್ಮಾನಿಸುವ ಕಾಲಘಟ್ಟವಿದು. ಇದೀಗ ಹೆಮ್ಮೆಯ ಸಾಧಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಹೊತ್ತವನನ್ನೂ ಸನ್ಮಾನಿಸುತ್ತಿದ್ದಾರೆ. ಸಂತರೇ ಇದಕ್ಕೆ ನೇತೃತ್ವ ವಹಿಸುತ್ತಿದ್ದಾರೆ ಎನ್ನುವುದು ಅದಕ್ಕಿಂತಲೂ ದೊಡ್ಡ ದುರಂತ.

ಹಿಂದೂ ರಾಷ್ಟ್ರ ಪರಿಕಲ್ಪನೆಯ ಹೊಸ ಭಾರತದಲ್ಲಿ ಕೊಲೆಗಡುಕರಿಗೆ, ಅತ್ಯಾಚಾರಿ ಗಳಿಗೆ ರಕ್ಷಣೆ, ನ್ಯಾಯ ಕೇಳಿದವರಿಗೆ ಶಿಕ್ಷೆ ಎನ್ನುವುದರ ಸಣ್ಣ ಉದಾಹರಣೆಗಳು ಇವು.

ಮೊದಲು, ಪ್ರಶ್ನೆ ಕೇಳಿದ ಜನರನ್ನು ಗುರಿ ಮಾಡಿ ದೇಶದ್ರೋಹಿಗಳೆನ್ನುತ್ತಿದ್ದವರು ಈಗ ದೇಶದ ಮುಖ್ಯ ನ್ಯಾಯಮೂರ್ತಿಗಳನ್ನೇ ದೇಶವಿರೋಧಿ ಎಂದು ಹೇಳುತ್ತಿದ್ದಾರೆ. ಅಲ್ಲಿಗೆ, ತಮ್ಮನ್ನು, ತಮ್ಮ ದರ್ಪವನ್ನು ಪ್ರಶ್ನಿಸಿದರೆ ಅವರು ಯಾರೇ ಆದರೂ ಸರಿ, ಅವರನ್ನು ಬಿಡುವುದಿಲ್ಲ ಎಂದು ಇವರು ಹೇಳಹೊರಟಂತಿದೆ.

ದೇಶ ಅಪಾಯಕಾರಿ ದಿಕ್ಕಿನಲ್ಲಿ ಮುನ್ನುಗ್ಗುತ್ತಿರುವ ಈ ದಿನಗಳಲ್ಲಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ನ್ಯಾಯಾಂಗ, ಸೌಹಾರ್ದತೆ ಉಳಿಯಲು ನ್ಯಾ. ಚಂದ್ರಚೂಡ್ ಅವರಂಥವರು ಈ ಹಿಂದೆಂದಿಗಿಂತಲೂ ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಅಗತ್ಯವಾಗಿದ್ದಾರೆ. ಅವರ ಜೊತೆ ದೇಶದ ಪ್ರತಿಯೊಬ್ಬ ಪ್ರಜೆ ನಿಲ್ಲಬೇಕಾಗಿದೆ.

Similar News