’ಅಜ್ಮೀರ್ 92’ ಚಲನಚಿತ್ರ ನಿಷೇಧಕ್ಕೆ ಜಮೀಯತ್ ಉಲಮಾ ಹಿಂದ್ ಆಗ್ರಹ

Update: 2023-06-05 15:07 GMT

ಹೊಸದಿಲ್ಲಿ: ಸಮಾಜದಲ್ಲಿ ವಿಭಜನೆ ಮತ್ತು ಸಂಘರ್ಷವನ್ನು ಸೃಷ್ಟಿಸುವ ಉದ್ದೇಶದ "ಅಜ್ಮೀರ್ 92" ಚಲನಚಿತ್ರವನ್ನು ನಿಷೇಧಿಸುವಂತೆ ಜಮೀಯತ್ ಉಲಮಾ ಇ ಹಿಂದ್ ಅಧ್ಯಕ್ಷ ಮೌಲಾನಾ ಮಹಮ್ಮೂದ್ ಮದನಿ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಈ ಚಿತ್ರವನ್ನು ನಿಷೇಧಿಸುವ ಮೂಲಕ "ಕೋಮು ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನವನ್ನು ವಿಫಲಗೊಳಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಖ್ವಾಜಾ ಮುಈನುದ್ದೀನ್ ಚಿಷ್ತಿ ಅಜ್ಮೀರ್, ಹಿಂದೂ- ಮುಸ್ಲಿಂ ಏಕತೆಗೆ ಉದಾಹರಣೆಯಾಗಿದ್ದು, ನಿಜವಾದ ಸುಲ್ತಾನ್ ಲಕ್ಷಾಂತರ ಮಂದಿಯ ಹೃದಯವನ್ನು ಗೆಲ್ಲುವಂಥ ಆಡಳಿತ ನಡೆಸಿದ್ದರು ಎಂದು ಪ್ರತಿಪಾದಿಸಿದ್ದಾರೆ. "ಅವರು ನಿಜವಾಗಿ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯದ ದೇವದೂತ" ಎನಿಸಿಕೊಂಡಿದ್ದರು ಎಂದು ಬಣ್ಣಿಸಿದ್ದಾರೆ.

"ಪ್ರಸಕ್ತ ಸನ್ನಿವೇಶದಲ್ಲಿ ಧರ್ಮದ ನೆಲೆಯಲ್ಲಿ ಸಮಾಜವನ್ನು ಒಡೆಯುವ ಭಿನ್ನ ಮಾರ್ಗಗಳನ್ನು ಶೋಧಿಸಲಾಗುತ್ತಿದೆ. ನಿರ್ಧಿಷ್ಟ ಧರ್ಮ ಮತ್ತು ಅಪರಾಧ ಕೃತ್ಯಗಳನ್ನು ಸಂಪರ್ಕಿಸುವ ಸಲುವಾಗಿ ಚಲನಚಿತ್ರಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಲಾಗುತ್ತಿದೆ. ಇದು ನಮ್ಮ ಭವ್ಯ ಹಾಗೂ ಪರಸ್ಪರ ಹಂಚಿಕೆಯ ಪರಂಪರೆಯನ್ನು ಖಂಡಿತವಾಗಿಯೂ ಹಾಳು ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಜ್ಮೀರ್ ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ಇಡೀ ಸಮಾಜಕ್ಕೆ ಭಯಾನಕ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಆಪಾದಿಸಿರುವ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ವರ ಹಾಗೂ ಶಕ್ತಿ ಎಂದು ಹೇಳಿದ್ದಾರೆ.

Similar News