ಉಡುಪಿ ನಗರದಲ್ಲಿ ತೀವ್ರಗೊಳ್ಳುತ್ತಿರುವ ನೀರಿನ ಸಮಸ್ಯೆ: ನಗರಸಭೆಯಿಂದ ಸರಕಾರಿ ಶಾಲೆಗಳಿಗೆ ಟ್ಯಾಂಕರ್ ನೀರು ಪೂರೈಕೆ

Update: 2023-06-05 15:13 GMT

ಉಡುಪಿ: ಮಳೆ ಬಾರದ ಕಾರಣ ಉಡುಪಿ ನಗರದ ಸರಕಾರಿ ಶಾಲೆಗಳು ಕೂಡ ನೀರಿನ ಕೊರತೆ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಸಭೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯ ನಡೆಯುತ್ತಿದೆ.

ನಗರದ ಬೋರ್ಡ್ ಹೈಸ್ಕೂಲ್, ಒಳಕಾಡು ಸಂಯುಕ್ತ ಸರಕಾರಿ ಪ್ರೌಢಶಾಲೆ ಹಾಗೂ ಗೋಪಾಲಪುರ ಸರಕಾರಿ ಶಾಲೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.  ಆದುದರಿಂದ ಶಾಲೆಗಳಿಗೆ 5-6ಸಾವಿರ ಲೀಟರ್ ನೀರನ್ನು ಎರಡು ದಿನಗಳಿ ಗೊಮ್ಮೆ ಪೂರೈಕೆ ಮಾಡಲಾಗುತ್ತಿದೆ ಎಂದು ಪೌರಾಯುಕ್ತ ಆರ್.ಪಿ.ನಾಯ್ಕ್ ತಿಳಿಸಿದ್ದಾರೆ.

ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂನಲ್ಲಿ ಪ್ರಸ್ತುತ 2.51 ಮೀಟರ್ ನೀರಿನ ಸಂಗ್ರಹವಿದ್ದು, ಇದನ್ನು ಒಂದು ವಾರಗಳ ಕಾಲ ಬಳಸಬಹುದಾಗಿದೆ. ಸದ್ಯ ಒಂದು ಹೊಂಡದಿಂದ ಪಂಪ್ ಮೂಲಕ ನೀರನ್ನು ಹರಿಸಲಾಗು ತ್ತಿದ್ದು, ಇದು ಖಾಲಿಯಾದ ಬಳಿಕ ಇನ್ನೊಂದು ಕೊನೆಯ ಹೊಂಡದಲ್ಲಿನ ನೀರನ್ನು ಪಂಪಿಂಗ್ ಮಾಡಲಾಗುವುದು. ಇದರಲ್ಲಿ ಮೂರು ದಿನಗಳಿಗೆ ಬೇಕಾಗುವಷ್ಟು ನೀರು ಸಿಗಬಹುದು ಎಂದು ಅವರು ಹೇಳಿದ್ದಾರೆ.

ಸದ್ಯಕ್ಕೆ ನಗರದಲ್ಲಿ 10 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಒಂದು ವೇಳೆ ನೀರಿನ ಅಭಾವ ಇನ್ನಷ್ಟು ತೀವ್ರಗೊಂಡರೆ ಮತ್ತೆ ಐದು ಹೆಚ್ಚುವರಿ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುವುದು. ಸದ್ಯಕ್ಕೆ 12ಸಾವಿರ ಲೀಟರ್ ನೀರಿನ ಟ್ಯಾಂಕರ್‌ಗೆ 1800ರೂ. ಪಾವತಿಸಲಾಗುತ್ತಿದೆ. ಸದ್ಯ ನೀರಿನ ಮೂಲಗಳಲ್ಲಿ ನೀರಿದ್ದು, ಅದರಿಂದಲೇ ಟ್ಯಾಂಕರ್‌ಗೆ ನೀರು ಬಳಸಿಕೊಳ್ಳಲಾಗುತ್ತದೆ. ಎರಡು ದಿನಗಳಲ್ಲಿ ಜಿಲ್ಲಾಸ್ಪತ್ರೆ ಸಮೀಪ ಒಂದು ಕೊಳವೆಬಾವಿಯನ್ನು ಕೊರೆಯಲು ಉದ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Similar News