ಪ್ರವಾಹ ಪೀಡಿತ ಪ್ರದೇಶಗಳ ಜನರ ರಕ್ಷಣೆಗಾಗಿ 7 ಬೋಟುಗಳು ಸಜ್ಜು: ವಸಂತ ಕುಮಾರ್

Update: 2023-06-05 15:17 GMT

ಉಡುಪಿ, ಜೂ.5: ಪ್ರವಾಹದಲ್ಲಿ ಸಿಲುಕಿರುವ ಸಾರ್ವಜನಿಕರ ರಕ್ಷಣೆಗಾಗಿ ಉಡುಪಿ ನಗರದಲ್ಲಿ ಮೂರು ಸೇರಿ ದಂತೆ ಜಿಲ್ಲೆಯಲ್ಲಿ ಒಟ್ಟು 7 ಬೋಟ್‌ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ವಸಂತ ಕುಮಾರ್ ಎಚ್.ಎಂ. ತಿಳಿಸಿದ್ದಾರೆ.

ಉಡುಪಿ ನಗರಸಭೆಯ ಸಭಾಂಗಣದಲ್ಲಿ ಇಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಮಳೆಗಾಲದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ರಸ್ತೆಗೆ ಬಿದ್ದ ಮರಗಳನ್ನು ಸಕಾಲದಲ್ಲಿ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿಕೋಪ ಎದುರಿಸುವುದಕ್ಕೆ ಸಿಬ್ಬಂದಿಗಳನ್ನು ಸಜ್ಜಾಗಿರಲು ಸೂಚನೆ ನೀಡಲಾಗಿದೆ ಎಂದರು.

ಮಳೆಗಾಲ ಆರಂಭವಾಗುವುದರಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಮಕ್ಕಳು ಸಹಿತ ಸಾರ್ವಜನಿಕರ ಮೇಲೆ ದಾಳಿ ನಡೆಸುವ ಮೊದಲು ಪಶು ಸಂಗೋಪನೆ, ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದು ಕೊಳ್ಳಬೇಕು ಎಂದು ಶಾಸಕರು ಹೇಳಿದರು. ಪಶು ಸಂಗೋಪನೆ ಇಲಾಖೆ ಜತೆ ಸೇರಿ ಕಳೆದ ಒಂದು ತಿಂಗಳಲ್ಲಿ 256 ನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ, ಸೂಕ್ತ ಆರೈಕೆ ಮಾಡಿದ್ದೇವೆ. 209 ನಾಯಿಗಳಿಗೆ ರ್ಯಾಬಿಸ್ ಲಸಿಕೆ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು. ಪೌರಾಯುಕತಿ ರಮೇಶ್ ಪಿ.ನಾಯ್ಕ್, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ನಾಥ, ಶ್ರೀಶ ಕೊಡವೂರು ಉಪಸ್ಥಿತರಿದ್ದರು.

17 ನರ್ಮ್ ಬಸ್‌ಗಳ ಓಡಾಟ

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈಗಾಗಲೇ ಸ್ಥಗಿತಗೊಂಡಿ ರುವ ಮಾರ್ಗಗಳಲ್ಲಿ ನರ್ಮ್ ಬಸ್‌ಗಳನ್ನು ಓಡಿಸಬೇಕು. ಅಂಬಲಪಾಡಿಯಿಂದ ಮಲ್ಪೆ, ಮಣಿಪಾಲ ಪೆರಂಪಳ್ಳಿ ಟ್ರಿನಿಟಿಯಿಂದ ಹಾವಂಜೆ ಸಹಿತ ಕೆಲ ಮಾರ್ಗಗಳಲ್ಲಿ ನರ್ಮ್ ಬಸ್ ಓಡಿಸುವಂತೆ ಸಾರ್ವಜನಿಕರ ಬೇಡಿಕೆ ಯಾಗಿದೆ. ಕೋವಿಡ್ ಪೂರ್ವದಲ್ಲಿದ್ದ 3 ಬಸ್‌ಗಳನ್ನು ಮರಳಿ ಉಡುಪಿಗೆ ತರಬೇಕೆಂದು ಯಶ್‌ಪಾಲ್ ಸುವರ್ಣ ತಿಳಿಸಿದರು.

ಉಡುಪಿ ನಗರಕ್ಕೆ 2019-20ನೇ ಸಾಲಿನಲ್ಲಿ 20 ನರ್ಮ್ ಬಸ್‌ಗಳ ಅನುಮತಿ ಸಿಕ್ಕಿ ಓಡಾಟ ನಡೆಸುತ್ತಿದ್ದು, ಕೊರೋನಾ ಹಿನ್ನೆಲೆಯಲ್ಲಿ 12 ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿತ್ತು. 2022-23ನೇ ಸಾಲಿನಲ್ಲಿ 17 ಬಸ್‌ಗಳು ಓಡಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Similar News