ವಾಹನದ ಮೇಲೆ ಜಾಹೀರಾತು ಫಲಕ ಬಿದ್ದು ತಾಯಿ ಮಗಳು ಮೃತ್ಯು

Update: 2023-06-06 03:28 GMT

ಲಕ್ನೋ: ಚಲಿಸುತ್ತಿದ್ದ ಮಹಿಂದ್ರಾ ಎಸ್‌ ಯು ವಿ ಮೇಲೆ ಬೃಹತ್ ಜಾಹೀರಾತು ಫಲಕ ಬಿದ್ದು, ಮಾಲ್‌ಗೆ ಹೋಗುತ್ತಿದ್ದ ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಇಲ್ಲಿನ ಇಕಾನಾ ಸ್ಟೇಡಿಯಂನ ಬಳಿ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ವಾಹನ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.

ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ. ಇಕಾನಾ ಸ್ಟೇಡಿಯಂನ ಹೊರಗಡೆ ಅಳವಡಿಸಿದ್ದ  ಜಾಹೀರಾತು ಫಲಕ ಸ್ಕಾರ್ಪಿಯೊ ವಾಹನದ ಮೇಲೆ ಬಿದ್ದು ಅದರಲ್ಲಿದ್ದ ಗಾಜಿಪುರ ಪ್ರದೇಶದ ಇಂದಿರಾ ನಗರ ಕಾಲೋನಿ ನಿವಾಸಿಗಳಾದ ಪ್ರೀತಿ ಜಗ್ಗಿ (38), ಪುತ್ರಿ ಏಜೆಂಲ್ (15) ಮೃತಪಟ್ಟಿದ್ದಾರೆ ಎಂದು ಗೋಸಾಯಿಗಂಜ್ ಸಹಾಯಕ ಪೊಲೀಸ್ ಕಮಿಷನರ್ ಅಮಿತ್ ಕುಮಾವತ್ ತಿಳಿಸಿದ್ದಾರೆ.

ತಾಯಿ- ಮಗಳು ತಮ್ಮ ಚಾಲಕ ಸರ್ತಾಜ್ (28) ಜೊತೆ ಮಾಲ್‌ಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಠಾಣಾಧಿಕಾರಿ ಅತುಲ್ ಕುಮಾರ್ ಶ್ರೀವಾಸ್ತವ ವಿವರಿಸಿದ್ದಾರೆ. ಸ್ಟೇಡಿಯಂನ 2ನೇ ಪ್ರವೇಶದ್ವಾರದ ಬಳಿ ಅಳವಡಿಸಲಾಗಿದ್ದ ಜಾಹೀರಾತು ಫಲಕ ವಾಹನದ ಮೇಲೆ ಬಿದ್ದಿದೆ. ಸರ್ತಾಜ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Similar News