ಸಂಪುಟದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ: ಸಿಎಂ ಅಪರ ಕಾರ್ಯದರ್ಶಿಯಾಗಿ ಝಿಯಾವುಲ್ಲಾ ನೇಮಕ

Update: 2023-06-07 03:21 GMT

ಬೆಂಗಳೂರು: ಸಣ್ಣಪುಟ್ಟ ಜಾತಿಯವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿ ಸಾಮಾಜಿಕ ನ್ಯಾಯ ನೀತಿಯನ್ನು ಪಾಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿ, ನೌಕರರನ್ನು ಮುಖ್ಯಮಂತ್ರಿಗಳ ಸಚಿವಾಲಯದಿಂದಲೇ ದೂರ ಇಟ್ಟಿದ್ದಾರೆ ಎಂದು ‘the-file.in’ ಮತ್ತು ವಾರ್ತಾಭಾರತಿ ವರದಿ ಬೆನ್ನಲ್ಲೇ ಇದೀಗ ನಿವೃತ್ತ ಐಎಎಸ್ ಅಧಿಕಾರಿ ಎಸ್.ಝಿಯಾವುಲ್ಲಾ ಅವರನ್ನು ಮುಖ್ಯಮಂತ್ರಿಯ ಅಪರ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಈ ಸಂಬಂಧ  2023ರ ಜೂನ್ 6ರಂದು ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಸ್ಲಿಮ್  ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಅರ್ಹ ಉನ್ನತ ಅಧಿಕಾರಿಗಳಿದ್ದರೂ ಅವರನ್ನು ನೇಮಿಸಿಕೊಂಡಿರಲಿಲ್ಲ. ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮುಸ್ಲಿಮ್ ಅಧಿಕಾರಿಗಳನ್ನು ನೇಮಿಸಬಾರದು ಎಂದು ಸಿದ್ದರಾಮಯ್ಯ ಅವರ ನಿಕಟವರ್ತಿ ಶಾಸಕರೊಬ್ಬರ ಸಲಹೆ ಮೇರೆಗೆ ಯಾವೊಬ್ಬ ಮುಸ್ಲಿಮ್ ಅಧಿಕಾರಿಯನ್ನೂ ಸಿಎಂ ಕಚೇರಿಗೆ ನೇಮಿಸಿಲ್ಲ ಎಂದು ಹೇಳಲಾಗಿತ್ತು.  ಈ ಕುರಿತು ‘the-file.in’ ಮತ್ತು ವಾರ್ತಾಭಾರತಿ 2023ರ ಮೇ 29ರಂದು ವರದಿ ಪ್ರಕಟಿಸಿತ್ತು.

ಹಿಂದಿನ ಬಿಜೆಪಿ ಸರಕಾರದಲ್ಲಿ ವಿವಾದದ ತೀರ್ಮಾನಗಳನ್ನು ಕೈಗೊಂಡು ಆದೇಶ ಹೊರಡಿಸಿದ್ದ ಬಹುತೇಕ   ಅಧಿಕಾರಿಗಳನ್ನು ಸಿಎಂ ಸಚಿವಾಲಯಕ್ಕೆ ನೇಮಿಸಿಕೊಂಡಿದ್ದ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಸಮುದಾಯದ ಅಧಿಕಾರಿ, ನೌಕರರನ್ನು ದೂರವಿರಿಸಿದ್ದು, ಆ ಸಮುದಾಯಗಳ ಅಧಿಕಾರಿ ವರ್ಗದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

ಈಗಾಗಲೇ ಒಳಾಡಳಿತ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆ ಕಾರ್ಯಭಾರ ಹೊಂದಿರುವ ರಜನೀಶ್ ಗೋಯಲ್ ಅವರು ಮುಖ್ಯಮಂತ್ರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಏಕಕಾಲದಲ್ಲಿ ಮೂರು ಹುದ್ದೆಗಳಲ್ಲಿ ರಜನೀಶ್ ಗೋಯಲ್ ಅವರು ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಧಿಕಾರಿಶಾಹಿ ವರ್ಗದಿಂದಲೇ ಅಪಸ್ವರ ಕೇಳಿ ಬಂದಿದೆ.

ಅದೇ ರೀತಿ ಎನ್ ಜಯರಾಂ ಅವರನ್ನು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆಯಾದರೂ ವಾರ್ತಾ ಇಲಾಖೆಯ ಜವಾಬ್ದಾರಿಯ ಜತೆಯಲ್ಲಿಯೇ ಮುಖ್ಯಮಂತ್ರಿಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿರುವುದಕ್ಕೂ ಅಧಿಕಾರಿಶಾಹಿ ವಲಯದಲ್ಲಿ ಆಕ್ಷೇಪಗಳು ಕೇಳಿ ಬಂದಿವೆ.

Similar News