ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಮಾತುಕತೆಗೆ ಆಹ್ವಾನಿಸಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್

Update: 2023-06-07 04:40 GMT

ಹೊಸದಿಲ್ಲಿ: ಲೈಂಗಿಕ ಕಿರುಕುಳದ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಹಾಗೂ  ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಸರಕಾರ ಮಾತುಕತೆಗೆ ಆಹ್ವಾನಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಇಂದು ಹೇಳಿದ್ದಾರೆ.

ಇದೇ ವಿಷಯಗಳ ಕುರಿತು ಚರ್ಚಿಸಲು ಕುಸ್ತಿಪಟುಗಳು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಕ್ರೀಡಾ ಸಚಿವರು ಮಾತುಕತೆಗೆ ಆಹ್ವಾನಿಸಿದ್ದಾರೆ.

"ಸರಕಾರವು ಕುಸ್ತಿಪಟುಗಳೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿದೆ. ನಾನು ಮತ್ತೊಮ್ಮೆ ಕುಸ್ತಿಪಟುಗಳನ್ನು ಅದಕ್ಕಾಗಿ ಆಹ್ವಾನಿಸಿದ್ದೇನೆ" ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ.

ಕುಸ್ತಿಪಟುಗಳು ಶನಿವಾರ  ಅಮಿತ್ ಶಾ ಅವರೊಂದಿಗೆ ತಡರಾತ್ರಿ ಸಭೆ ನಡೆಸಿದ್ದರು. ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಸಭೆಯ ಬಗ್ಗೆ ಮಾತನಾಡದಂತೆ ಪ್ರತಿಭಟನಾಕಾರರನ್ನು ಸರಕಾರ ಕೇಳಿಕೊಂಡಿದೆ ಎಂದು ಹೇಳಿದ್ದರು.

ಶಾ ಅವರು ಪುನಿಯಾ, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್ ಮತ್ತು ಸತ್ಯವರ್ತ್ ಕಡಿಯನ್ ಅವರನ್ನು ಶನಿವಾರ ರಾತ್ರಿ 11 ಗಂಟೆಗೆ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ ಕುಸ್ತಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.

Similar News