ಔರಂಗಜೇಬ್, ಟಿಪ್ಪು ಸುಲ್ತಾನ್ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌: ಕೊಲ್ಲಾಪುರದಲ್ಲಿ ಉದ್ವಿಗ್ನತೆ

Update: 2023-06-07 12:42 GMT

ಕೊಲ್ಲಾಪುರ್: ಔರಂಗ್‌ಜೇಬ್‌ ಮತ್ತು ಟಿಪ್ಪು ಸುಲ್ತಾನ್‌ ಅವರ ಕುರಿತ ಕೆಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಖಂಡಿಸಿ ಹಿಂದುತ್ವ ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್‌ ಹಾಗೂ ಪ್ರತಿಭಟನೆಗಳು ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ಮತೀಯ ಉದ್ವಿಗ್ನತೆಗೆ ಕಾರಣವಾಗಿವೆ.

ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಚೌಕ್‌ನಲ್ಲಿ ಪ್ರತಿಭಟನಾಕಾರರ ಗುಂಪೊಂದು ಅಂಗಡಿಗಳಿಗೆ ನುಗ್ಗಿ ದಾಂಧಲೆಗೈದು ವಾಹನಗಳಿಗೆ ಬೆಂಕಿ ಹಚ್ಚಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಆಕ್ಷೇಪಾರ್ಹ ಸಾಮಾಜಿಕ ಜಾಲತಾಣ ಪೋಸ್‌ಗಳಿಗೆ ಸಂಬಂಧಿಸಿದಂತೆ ಮಂಗಳವಾರ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಮಹೇಂದ್ರ ಪಂಡಿತ್‌ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲಕ್ಷ್ಮೀಪುರಿ ಠಾಣೆಯೆದುರು ಗುಂಪು ಜಮಾಯಿಸಿತ್ತು. ಅವರೆಲ್ಲ ವಾಪಸಾಗುತ್ತಿರುವಾಗ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಬುಧವಾರದ ಪ್ರತಿಭಟನೆಯ ನಂತರವೂ ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂಬ ಮಾಹಿತಿ ಹಿರಿಯ ಅಧಿಕಾರಿಗಳಿಂದ ದೊರೆತಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ, ಹೆಚ್ಚುವರಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕೊಲ್ಲಾಪುರ ಕಲೆಕ್ಟರ್‌ ರಾಹುಲ್‌ ರೆಖಾವರ್‌ ಹೇಳಿದ್ದಾರೆ.

Similar News