ತಮಿಳುನಾಡು: ‌ದಲಿತರ ಪ್ರವೇಶಕ್ಕೆ ನಿರಾಕರಣೆ; ದೇವಸ್ಥಾನ ಸೀಲ್‌ ಮಾಡಿದ ಅಧಿಕಾರಿಗಳು

Update: 2023-06-07 13:04 GMT

ವಿಲ್ಲುಪುರಂ: ತಮಿಳುನಾಡಿನ ವಿಲ್ಲಪುರಂ ಜಿಲ್ಲೆಯ ಮೇಲ್ಪತ್ತಿ ಎಂಬ ಗ್ರಾಮದಲ್ಲಿನ ಧರ್ಮರಾಜ ದ್ರೌಪದಿ ಅಮ್ಮನ್‌ ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕೆ ಅಲ್ಲಿನ ವಣ್ಣಿಯಾರ್‌ ಸಮುದಾಯ ಆಕ್ಷೇಪಿಸಿರುವುದರಿಂದ  ಎರಡೂ ಸಮುದಾಯಗಳ ನಡುವೆ ಹಲವು ಸುತ್ತಿನ ಶಾಂತಿ ಮಾತುಕತೆಗಳು ಫಲಪ್ರದವಾಗದೇ ಇರುವ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಈ ದೇವಸ್ಥಾನವನ್ನು ವಿಲ್ಲುಪುರಂ ಜಿಲ್ಲಾ ಕಂದಾಯ ವಿಭಾಗಾಧಿಕಾರಿ ಸೀಲ್‌ ಮಾಡಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಗ್ರಾಮದಲ್ಲಿ 2000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ನೆರೆಯ ಗ್ರಾಮಗಳಲ್ಲೂ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.

ಸುಮಾರು ಏಳು ಸುತ್ತಿನ ಮಾತುಕತೆಗಳನ್ನು  ಜಿಲ್ಲಾಡಳಿತ ನಡೆಸಿದರೂ ವಣ್ಣಿಯಾರ್‌ ಸಮುದಾಯವು ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕೆ ನಿರಾಕರಿಸಿತ್ತು. ಎರಡು ಸಭೆಗಳ ನೇತೃತ್ವವವನ್ನು ವಿಲ್ಲುಪುರಂ ಜಿಲ್ಲಾ ಕಲೆಕ್ಟರ್‌ ಸಿ ಪಳನಿ ವಹಿಸಿದ್ದರೆ ಉಳಿದ ಐದು ಸಭೆಗಳ ಅಧ್ಯಕ್ಷತೆಯನ್ನು ರವಿಚಂದ್ರನ್‌ ವಹಿಸಿದ್ದರು.

ಈ ದೇವಸ್ಥಾನ ತಮ್ಮ  ಸಮುದಾಯದ ದೇವಸ್ಥಾನವಾಗಿದ್ದು ಹಾಗೂ ಈ ದೇವರನ್ನು ತಮ್ಮ ಸಮುದಾಯದ ಜನರು ಮಾತ್ರ ತಲೆತಲಾಂತರಗಳಿಂದ ಆರಾಧಿಸಿಕೊಂಡು ಬಂದಿದ್ದಾರೆ ಈ ದೇವಸ್ಥಾನ ಹಿಂದು ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣದಡಿ ಬರುವುದಿಲ್ಲ ಎಂದೂ ಹೇಳಿಕೊಂಡಿರುವ ವಣ್ಣಿಯಾರ್‌ ಸಮುದಾಯ ಈ ದೇವಳದ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಆಕ್ಷೇಪಿಸಿದೆ.

ಈ ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕೆ ಅನುಕೂಲ ಕಲ್ಪಿಸಬೇಕೆಂದು ಮೇ 17ರಂದು ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ನಂತರ ವಣ್ಣಿಯಾರ್‌ ಸಮುದಾಯ ಪ್ರತಿಭಟನೆ ನಡೆಸಿತ್ತಲ್ಲದೆ ತಮ್ಮ ಆಕ್ರೋಶ ಹೊರಹಾಕಲು ಸಮುದಾಯದ ಮಂದಿ ತಮ್ಮ ಆಧಾರ್‌, ಮತದಾರ ಐಡಿ ಮತ್ತು ರೇಷನ್‌ ಕಾರ್ಡುಗಳನ್ನು ಎಸೆದಿದ್ದರು.
ಎಪ್ರಿಲ್‌ 7ರಂದು ದೇವಸ್ಥಾನ ಪ್ರವೇಶಿಸಿದ ಕೆಲ ದಲಿತ ವ್ಯಕ್ತಿಗಳನ್ನು ವಣ್ಣಿಯಾರ್‌ ಸಮುದಾಯಕ್ಕೆ ಸೇರಿದವರು ಥಳಿಸಿದ ನಂತರ ವಿವಾದ ತೀವ್ರ ಸ್ವರೂಪಕ್ಕೆ ತಿರುಗಿತ್ತು.

Similar News