‘ಬಿಪೋರ್‌ಜಾಯ್’ ಚಂಡಮಾರುತ ಪ್ರಭಾವ: ರಾಜ್ಯ ಕರಾವಳಿಯಲ್ಲಿ ಭಾರೀ ಮಳೆಯ ಎಚ್ಚರಿಕೆ

Update: 2023-06-07 15:56 GMT

ಉಡುಪಿ, ಜೂ.7: ರಾಜ್ಯದ ಪಶ್ಚಿಮ ಕರಾವಳಿಯ ಅರಬಿಸಮುದ್ರದಲ್ಲಿ  ಸೋಮವಾರ ಉಂಟಾದ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಅರಬಿಸಮುದ್ರದ ಆಗ್ನೇಯ ಭಾಗದಲ್ಲಿ ಎದ್ದಿರುವ ಈ ಚಂಡಮಾರುತ ‘ಬಿಪೋರ್‌ಜಾಯ್’ ತೀವ್ರಗೊಂಡು ಉತ್ತರ ದಿಕ್ಕಿನತ್ತ ಗಂಟೆಗೆ 5ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಬೆಳಗ್ಗೆ 8:30ರ ಸುಮಾರಿಗೆ ಚಂಡಮಾರುತವು ಗೋವಾದಿಂದ ನೈಋತ್ಯದಲ್ಲಿ 880ಕಿ.ಮೀ. ದೂರದಲ್ಲಿ, ಮುಂಬಯಿಯಿಂದ ನೈಋತ್ಯ ದಿಕ್ಕಿನಲ್ಲಿ 990 ಕಿ.ಮೀ., ಪೋರ್‌ಬಂದರಿನಿಂದ 1060 ಹಾಗೂ ಕರಾಚಿಯಿಂದ 1360ಕಿ.ಮೀ ದೂರದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ವರದಿ ತಿಳಿಸಿದೆ.

ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವು ಇನ್ನಷ್ಟು ತೀವ್ರಗೊಳ್ಳಲಿದ್ದು, 24 ಗಂಟೆಗಳಲ್ಲಿ ಅದು ಉತ್ತರ ದಿಕ್ಕಿನಲ್ಲಿ ಹಾಗೂ ಮುಂದಿನ ಮೂರು ದಿನಗಳಲ್ಲಿ ಉತ್ತರ- ಈಶಾನ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ. 

ಇದರ ಪ್ರಭಾವದಿಂದ ರಾಜ್ಯ ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗಾಳಿಯೊಂದಿಗೆ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ರಾಜ್ಯ ಕರಾವಳಿಯಲ್ಲಿ ಗಂಟೆಗೆ 40ರಿಂದ 50ಕಿ.ಮೀ. (ಗರಿಷ್ಠ 60ಕಿ.ಮೀ.) ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಕಡ್ಡಾಯವಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. 

ಬಿರುಗಾಳಿಯಿಂದಾಗಿ ಸಮುದ್ರದಲ್ಲಿ 2.3ಮೀ.ನಿಂದ 3.2ಮೀ. ಎತ್ತರ ಅಲೆಗಳು ಅರಬಿಸಮುದ್ರದಲ್ಲಿ ಕಾರವಾರ ದಿಂದ ಮಂಗಳೂರುವರೆಗೆ ಏಳು ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Similar News