ಕೆಟಿಎಫ್ ಪ್ರಕರಣ: ಪಂಜಾಬ್,‌ ಹರ್ಯಾಣದಿಂದ ಆರು ಆರೋಪಿಗಳನ್ನು ಬಂಧಿಸಿದ ಎನ್ಐಎ

Update: 2023-06-07 16:55 GMT

ಹೊಸದಿಲ್ಲಿ: ಖಲಿಸ್ತಾನ್ ಟೈಗರ್ ಫೋರ್ಸ್ (KTF)ಗೆ ಸಂಬಂಧಿಸಿದಂತೆ ಮಂಗಳವಾರ ಪಂಜಾಬ್ ಮತ್ತು ಹರ್ಯಾಣಗಳ ಹತ್ತು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಈವರೆಗೆ ಆರು ಜನರನ್ನು ಬಂಧಿಸಿದೆ.

‌ಭಯೋತ್ಪಾದಕ ಅರ್ಷದೀಪ್ ಸಿಂಗ್ ದಲಾ ಮತ್ತು ತಲೆಮರೆಸಿಕೊಂಡಿರುವ ಆತನ ನಿಕಟವರ್ತಿ ಮನಪ್ರೀತ್ ಸಿಂಗ್ ಅಲಿಯಾಸ್ ಪೀಟಾಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ ಎನ್ಐಎ ಡಿಜಿಟಲ್ ಸಾಧನಗಳು ಸೇರಿದಂತೆ ಹಲವಾರು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿದೆ. ಭಾರತದಲ್ಲಿ ಕ್ರಿಮಿನಲ್/ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ‘ವ್ಯಕ್ತಿಗತ ಭಯೋತ್ಪಾದಕರು ’ ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಎನ್ಐಎ ಕಾರ್ಯಾಚರಣೆಯ ಅಂಗವಾಗಿ ಈ ದಾಳಿಗಳನ್ನು ನಡೆಸಲಾಗಿತ್ತು.

ಪ್ರಕರಣದಲ್ಲಿ ಈವರೆಗೆ ಆರು ಜನರನ್ನು ಬಂಧಿಸಲಾಗಿದೆ. ದಲಾ ಮತ್ತು ಫಿಲಿಪ್ಪೀನ್ಸ್ ನಲ್ಲಿ ತಲೆಮರೆಸಿಕೊಂಡಿರುವ ಮನ್ಪ್ರೀತ್ ಸಿಂಗ್ ಸೇರಿದಂತೆ ವಿವಿಧ ದೇಶಗಳಲ್ಲಿರುವ ಆತನ ಸಹಚರರು ನಿಷೇಧಿತ ಭಯೋತ್ಪಾದಕ ಸಂಘಟನೆ ಕೆಟಿಎಫ್ನ ಚಟುವಟಿಕೆಗಳನ್ನು ನಡೆಸಲು ಭಾರತದಲ್ಲಿ ನಿರಂತರವಾಗಿ ಹೊಸ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ತನಿಖೆಯು ಬಹಿರಂಗಗೊಳಿಸಿದೆ.

ಅವರು ಹಫ್ತಾ ವಸೂಲಿ ಮತ್ತು ಇತರ ವಿಧಾನಗಳ ಮೂಲಕ ಸಂಘಟನೆಗಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ ಹಾಗೂ ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು,ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಕಳ್ಳ ಸಾಗಾಣಿಕೆ ನಡೆಸುತ್ತಿದ್ದಾರೆ ಎಂದು ಎನ್ಐಎ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

Similar News