ಹೆಚ್ಚುತ್ತಿರುವ ದಾಳಿ: ಶಸ್ತ್ರಾಸ್ತ್ರ ಒಪ್ಪಿಸಲು ಜನರಿಂದ ಹಿಂದೇಟು ಅಮಿತ್ ಶಾಗೆ ಸಂಘಟನೆಯಿಂದ ಪತ್ರ

Update: 2023-06-07 17:35 GMT

ಗುವಾಹಟಿ: ಕುಕಿ ‘‘ಭಯೋತ್ಪಾದಕರು’’ ತಮ್ಮ ದಾಳಿಗಳನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ರಾಜ್ಯದ ಯುವಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ಮಣಿಪುರದ ನಾಗರಿಕ ಸಮಾಜ ಗುಂಪೊಂದು ಹೇಳಿದೆ.

‌ಇಂಫಾಲ್ ಕಣಿವೆ ಮತ್ತು ಸುತ್ತಲಿನ ತಪ್ಪಲಿನಲ್ಲಿ ವಾಸಿಸುತ್ತಿರುವ ಮೆಟಾಯ್ ಜನರ ಮೇಲೆ ಕುಕಿ ಉಗ್ರವಾದಿ ಗುಂಪುಗಳು ಸರಣಿ ದಾಳಿಗಳನ್ನು ನಡೆಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬರೆದ ಪತ್ರವೊಂದರಲ್ಲಿ ‘ಕೋಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ್ ಇಂಟಗ್ರಿಟಿ (COCOMI)’ ಎಂಬ ಸಂಘಟನೆ ಹೇಳಿದೆ. ಈ ಸಂಘಟನೆ ಮುಖ್ಯವಾಗಿ ಬಹುಸಂಖ್ಯಾತ ಮೆಟಾಯ್ ಸಮುದಾಯದ ಸದಸ್ಯರನ್ನು ಪ್ರತಿನಿಧಿಸುತ್ತದೆ.

ಶಾಂತಿಗಾಗಿ ಗೃಹ ಸಚಿವರು ಮಾಡಿರುವ ಮನವಿಯು ತಳಮಟ್ಟದ ಪರಿಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅದು ಹೇಳಿದೆ. ಗೃಹ ಸಚಿವರು ನೀಡಿರುವ ಕಠಿಣ ಕ್ರಮದ ಎಚ್ಚರಿಕೆಯ ಹೊರತಾಗಿಯೂ ಇಂಫಾಲ್ ಕಣಿವೆಯಲ್ಲಿ ಸಾಮಾನ್ಯ ಪರಿಸ್ಥಿತಿ ಇನ್ನೂ ಮರಳಿಲ್ಲ ಎಂದು ಅದು ಹೇಳಿದೆ.

ಮಣಿಪುರದಲ್ಲಿ ಮೇ 3ರಂದು ಸ್ಫೋಟಗೊಂಡ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಮತ್ತು 35,000ಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.

Similar News