ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಇನ್ನೊಂದು ರೈಲು ಅಪಘಾತ

Update: 2023-06-07 17:55 GMT

ರಾಂಚಿ: ಝಾರ್ಖಂಡ್ ನ ಬೊಕಾರೊದಲ್ಲಿ ಮಂಗಳವಾರ ಸಂಜೆ ನಡೆಯಬಹುದಾಗಿದ್ದ ದೊಡ್ಡ ಅಪಘಾತವೊಂದನ್ನು ರೈಲು ಚಾಲಕ ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ್ದಾರೆ.

ಭೋಜುದಿಹ್ ರೈಲು ನಿಲ್ದಾಣದ ಸಮೀಪದಲ್ಲಿರುವ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ಹೊಸದಿಲ್ಲಿ-ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್  ರೈಲು ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಆ ಸಂದರ್ಭದಲ್ಲಿ ಟ್ರಾಕ್ಟರೊಂದು ರೈಲ್ವೇ ಗೇಟಿಗೆ ಢಿಕ್ಕಿ ಹೊಡೆದು ಹಳಿಯಲ್ಲೇ ಸಿಕ್ಕಿಹಾಕಿಕೊಂಡಿತ್ತು.

‘‘ಬೊಕಾರೊ ಜಿಲ್ಲೆಯ ಭೋಜುದಿಹ್ ರೈಲ್ವೇ ನಿಲ್ದಾಣದ ಸಮೀಪದ ಸಂತಾಲ್ದಿಹ್ ರೈಲ್ವೇ ಕ್ರಾಸಿಂಗ್ ನ ಬಾಗಿಲು ಮುಚ್ಚುತ್ತಿದ್ದಾಗ ಟ್ರಾಕ್ಟರೊಂದು ಬಾಗಿಲಿಗೆ ಢಿಕ್ಕಿ ಹೊಡೆಯಿತು. ಆಗ ರೈಲಿನ ಚಾಲಕ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದರು. ಈ ಮೂಲಕ ಸಂಭಾವ್ಯ ದೊಡ್ಡ ಅಪಘಾತವೊಂದನ್ನು ತಪ್ಪಿಸಿದರು’’ ಎಂದು ಆಗ್ನೇಯ ರೈಲ್ವೇಯ ಆಡ್ರ ವಿಭಾಗದ ಡಿಆರ್ಎಮ್ ಮನೀಶ್ ಕುಮಾರ್ ಪಿಟಿಐಗೆ ತಿಳಿಸಿದರು.

ಸಂಜೆ 5 ಗಂಟೆ ವೇಳೆಗೆ ಘಟನೆ ನಡೆಯಿತು ಹಾಗೂ ಇದರಿಂದಾಗಿ ರೈಲಿನ ಮುಂದಿನ ಯಾನ 45 ನಿಮಿಷಗಳಷ್ಟು ವಿಳಂಬಗೊಂಡಿತು ಎಂದು ಕುಮಾರ್ ತಿಳಿಸಿದರು.

‘‘ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಕಾವಲುಗಾರನ ನಿರ್ಲಕ್ಷವೇ ಘಟನೆಗೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಾವಲುಗಾರನನ್ನು ಅಮಾನತುಗೊಳಿಸಲಾಗಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ’’ ಎಂದು ಅವರು ನುಡಿದರು.

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದ ಕೆಲವೇ ದಿನಗಳ ಬಳಿಕ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಕನಿಷ್ಠ 288 ಮಂದಿ ಮೃತಪಟ್ಟಿದ್ದಾರೆ ಮತ್ತು 1,100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Similar News