ಕೊಟ್ಟಾಯಂ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ; ವಿದ್ಯಾರ್ಥಿಗಳಿಂದ ತೀವ್ರ ಪ್ರತಿಭಟನೆ

ಕಾಲೇಜ್ ಆಡಳಿತ ಮಂಡಳಿಯ ಮಾನಸಿಕ ಕಿರುಕುಳ ಆತ್ಮಹತ್ಯೆಗೆ ಕಾರಣ?

Update: 2023-06-07 18:03 GMT

ಕೊಟ್ಟಾಯಂ: ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಘಟನೆಯ ಬಳಿಕ ಕೇರಳದ ಕೊಟ್ಟಾಯಂನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಭುಗಿಲೆದ್ದಿದೆ. ಕಾಲೇಜಿನ ಆಡಳಿತ ಮಂಡಳಿಯ ಕಿರುಕುಳದಿಂದ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವಿದ್ಯಾರ್ಥಿ ಸಂಘಟನೆಗಳು ಆಪಾದಿಸಿವೆ.

ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಕೊಟ್ಟಾಯಂನ ಅಮಲಜ್ಯೋತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಪ್ರತಿಭಟನೆ ತೀವ್ರಗೊಂಡಿದೆ. ಈ ಮಧ್ಯೆ ಹಾಸ್ಟಲ್ ಕೊಠಡಿಗಳನ್ನು ಖಾಲಿ ಮಾಡುವಂತೆ ತಮಗೆ ಸೂಚನೆ ನೀಡಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು , ಆಡಳಿತ ಮಂಡಳಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಕಾಲೇಜನ್ನು ತಾತ್ಕಾಲಿಕವಾಗಿ ಮುಚ್ಚುಗಡೆಗೊಳಿಸುವ ಮೂಲಕ ಆಡಳಿತ ಮಂಡಳಿಯು ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿದೆಯೆಂದು ಅವರು ಆಪಾದಿಸಿದ್ದಾರೆ.

ಎರಡನೆ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಶ್ರದ್ಧಾ ಸತೀಶ್ ಜೂನ್ 2ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜಿನ ಆಡಳಿತ ಮಂಡಳಿಯಿಂದ ಮಾನಸಿಕ ಕಿರುಕುಳಕ್ಕೊಳಗಾಗಿ ಆಕೆ ಸಾವಿಗೆ ಶರಣಾಗಿದ್ದಾಳೆಂದು ಆಕೆಯ ಹೆತ್ತವರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಪಾದಿಸಿವೆ.

ಶ್ರದ್ಧಾ ಶುಕ್ರವಾರ ಮಧ್ಯಾಹ್ನದವರೆಗೂ ಚೆನ್ನಾಗಿಯೇ ಇದ್ದಳು. ಲ್ಯಾಬ್ತರಗತಿಯ ಸಂದರ್ಭ ಕಾಲೇಜಿನ ಆಧಿಸೂಚನೆಯನ್ನು ಪರಿಶೀಲಿಸಲು ಆಕೆ ಮೊಬೈಲನ್ನು ಹೊರತೆಗೆದಾಗ, ಶಿಕ್ಷಕರು ಆಕೆಯ ಫೋನನ್ನು ಕಿತ್ತುಕೊಂಡರು ಎಂದು ಮೂರನೆ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹಾಗೂ ಶ್ರದ್ಧಾ ಅವರ ಹಾಸ್ಟೆಲ್ ಸಹವರ್ತಿಯೊಬ್ಬರು ಹೇಳಿದ್ದಾರೆ.

ಆನಂತರ ಶ್ರದ್ಧಾರನ್ನು ವಿಭಾಗೀಯ ಮುಖ್ಯಸ್ಥರ ಕಚೇರಿಗೆ ಕೊಂಡೊಯ್ಯಲಾಯಿತು. ಅಲ್ಲಿ ಆಕೆಯನ್ನು ತೀವ್ರವಾಗಿ ನಿಂದಿಸಲಾಗಿದೆ. ಅಲ್ಲಿ ಏನು ನಡೆದಿದೆಯೆಂಬ ಬಗ್ಗೆ ನಮಗೆ ಮಾಹಿತಿಯಿಲ್ಲ. ವಿಭಾಗೀಯ ಮುಖ್ಯಸ್ಥರ ಕಚೇರಿಯಿಂದ ಹೊರಬಂದ ಬಳಿಕ ಶ್ರದ್ಧಾ ಆಳುತ್ತಾ, ತಾನು ಇನ್ನು ಬದುಕಲು ಬಯಸುವುದಿಲ್ಲವೆಂದು ಹೇಳಿದ್ದಳು ’’ಎಂದು ಆಕೆ ತಿಳಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯನ್ನು ಆರಂಭಿಸಿದ್ದು, ಆಡಳಿತ ಮಂಡಲಿಯು ಶಿಕ್ಷಣ ಸಂಸ್ಥೆಯು ಸೋಮವಾರ ರಾತ್ರಿಯಿಂದ ಅನಿರ್ದಿಷ್ಟಾವಧಿಗೆ ಮುಚ್ಚಿದೆ. ಹಾಸ್ಟೆಲ್ನ ವಿದ್ಯಾರ್ಥಿಗಳೆಲ್ಲರೂ ಮರುದಿನವೇ ತಮ್ಮ ಕೊಠಡಿಗಳನ್ನು ಖಾಲಿಮಾಡಬೇಕೆಂದು ಸೂಚಿಸಿದೆ ಎಂದು ದಿ ನ್ಯೂ ಇಂಡಿಯನ್ಎಕ್ಸ್ಪ್ರೆಸ್ ವರದಿ ಮಾಡಿದೆ.

ಕಾಲೇಜ್ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ.

ಶ್ರದ್ಧಾಳ ಆತ್ಮಹತ್ಯೆಗೆ ಕಾರಣವೇನೆಂಬುದು ತನಗೆ ತಿಳಿದಿಲ್ಲವೆಂದು ಕಾಲೇಜಿನ ಆಡಳಿತ ಮಂಡಳಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಪ್ರಕರಣವನ್ನು ದಾಖಿಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆಯೆಂದು ಕೊಟ್ಟಾಯಂ ಪೊಲೀಸರು ತಿಳಿಸಿದ್ದಾರೆ.

Similar News