ಪ್ರಶಸ್ತಿ ವಿಜೇತ ದೂರದರ್ಶನದ ನಿರೂಪಕಿ ಗೀತಾಂಜಲಿ ಅಯ್ಯರ್ ನಿಧನ

Update: 2023-06-08 06:43 GMT

ಹೊಸದಿಲ್ಲಿ: ರಾಷ್ಟ್ರೀಯ ಪ್ರಸಾರಕ  ದೂರದರ್ಶನದಲ್ಲಿ ಭಾರತದ ಮೊದಲ ಇಂಗ್ಲಿಷ್ ಮಹಿಳಾ ಸುದ್ದಿ ನಿರೂಪಕರಲ್ಲಿ ಒಬ್ಬರಾದ ಗೀತಾಂಜಲಿ ಅಯ್ಯರ್ ಅವರು ಬುಧವಾರ ನಿಧನರಾದರು.

ಅವರಿಗೆ 70 ವರ್ಷ ವಯಸ್ಸಾಗಿತ್ತು.

ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪ್ರಶಸ್ತಿ ವಿಜೇತ ನಿರೂಪಕಿ  ವಾಕಿಂಗ್ ಮುಗಿಸಿ ಮನೆಗೆ ಮರಳಿದ ನಂತರ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

"ಗೀತಾಂಜಲಿಗೆ ಪಾರ್ಕಿನ್ಸನ್ ಕಾಯಿಲೆ ಇತ್ತು. ಔಷಧಿ ತೆಗೆದುಕೊಳ್ಳುತ್ತಿದ್ದರು. ಅವರು ವಾಕಿಂಗ್ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಕುಸಿದು ಬಿದ್ದರು" ಎಂದು ಗೀತಾಂಜಲಿ ಅಯ್ಯರ್ ಅವರ ಆಪ್ತರು ಹೇಳಿದರು.

ಕೋಲ್ಕತ್ತಾದ ಲೊರೆಟೊ ಕಾಲೇಜಿನಿಂದ ಪದವಿ ಪಡೆದ ಗೀತಾಂಜಲಿ ಅಯ್ಯರ್ ಅವರು 1971 ರಲ್ಲಿ ದೂರದರ್ಶನವನ್ನು ಸೇರಿಕೊಂಡರು ಹಾಗೂ  ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ಪಡೆದರು. ಅವರು 1989 ರಲ್ಲಿ ಅತ್ಯುತ್ತಮ ಮಹಿಳೆಯರಿಗಾಗಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ಗೆದ್ದರು.

ಸುದ್ದಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದರ ಜೊತೆಗೆ, ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಯಿಂದ ಡಿಪ್ಲೊಮಾ ಪಡೆದಿರುವ ಗೀತಾಂಜಲಿ ಅಯ್ಯರ್ ಹಲವಾರು ಮುದ್ರಣ ಜಾಹೀರಾತುಗಳಲ್ಲಿ ಜನಪ್ರಿಯ ಮುಖವಾಗಿದ್ದರು ಹಾಗೂ  ಶ್ರೀಧರ್ ಕ್ಷೀರಸಾಗರ್ ಅವರ ಟಿವಿ ನಾಟಕ "ಖಂಡಾನ್" ನಲ್ಲಿ ನಟಿಸಿದ್ದಾರೆ.

ತನ್ನ ದಶಕಗಳ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಅವರು ವಿಶ್ವ ವನ್ಯಜೀವಿ ನಿಧಿ (WWF) ನೊಂದಿಗೆ ಸಹ ನಂಟು ಹೊಂದಿದ್ದರು.

ಗೀತಾಂಜಲಿ ಅವರ  ನಿಧನಕ್ಕೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಟ್ವಿಟರ್‌ ನಲ್ಲಿ ಸಂತಾಪ ವ್ಯಕ್ತಪಡಿಸಿದರು.

ಗೀತಾಂಜಲಿ ಅಯ್ಯರ್ ಅವರು ಓರ್ವ ಪುತ್ರ ಮತ್ತು ಪುತ್ರಿ ಪಲ್ಲವಿ ಅಯ್ಯರ್ ಅವರನ್ನು ಅಗಲಿದ್ದಾರೆ, ಪಲ್ಲವಿ ಅವರು ಪ್ರಶಸ್ತಿ ವಿಜೇತ ಪತ್ರಕರ್ತೆಯೂ ಆಗಿದ್ದಾರೆ.

Similar News