ರೈಲು ದುರಂತದಲ್ಲಿ ಕಾಣೆಯಾಗಿದ್ದ ಪುತ್ರನನ್ನು ಟಿವಿ ಲೈವ್‌ನಲ್ಲಿ ಪತ್ತೆಹಚ್ಚಿದ ವ್ಯಕ್ತಿ

Update: 2023-06-08 08:35 GMT

ಕಟಕ್: ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಜೂನ್ 2ರ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗನನ್ನು ನೇಪಾಳಿ ದಂಪತಿಗಳು ಒಂದುಗೂಡಲು ನೆರವಾಗಿರುವ ಘಟನೆ ವರದಿಯಾಗಿದೆ.

ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿರುವ 15 ವರ್ಷದ ರಮಾನಂದ ಪಾಸ್ವಾನ್ ಎಂಬ ಬಾಲಕನು ದೂರದರ್ಶನ ವಾಹಿನಿಯೊಂದರಲ್ಲಿ ನೇರ ಪ್ರಸಾರವಾಗುತ್ತಿದ್ದ ತನ್ನ ತಂದೆ-ತಾಯಿಯರ ಸಂದರ್ಶನವನ್ನು ವೀಕ್ಷಿಸಿ, ಆ ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳನ್ನು ಜಾಗೃತಗೊಳಿಸಿದ್ದಾನೆ.

288 ಮಂದಿ ಸಾವಿಗೆ ಕಾರಣವಾಗಿದ್ದ, ಜೂನ್ 2ರಂದು ಸಂಭವಿಸಿದ್ದ ಒಡಿಶಾ ರೈಲು ದುರಂತದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 15 ವರ್ಷದ ಬಾಲಕನು ನೇಪಾಳದಿಂದ ಆಗಮಿಸಿದ್ದ ತನ್ನ ತಂದೆ-ತಾಯಿಯರೊಂದಿಗೆ ಒಂದುಗೂಡಲು ನಂತರ ಆಸ್ಪತ್ರೆಯು ವ್ಯವಸ್ಥೆ ಮಾಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ ಹರಿ ಪಾಸ್ವಾನ್, "ನನ್ನ ಮಗನನ್ನು ಪತ್ತೆ ಹಚ್ಚಿದ್ದಕ್ಕೆ ಖುಶಿಯಾಗಿದೆ. ಆತ ನಮ್ಮ ಮೂವರು ಸಂಬಂಧಿಕರೊಂದಿಗೆ ಪ್ರಯಾಣಿಸುತ್ತಿದ್ದ. ಅವರೆಲ್ಲ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಆದರೆ, ನನ್ನ ಪುತ್ರ ಮಾತ್ರ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾನೆ" ಎಂದು ಹೇಳಿದ್ದಾರೆ.

ಭುವನೇಶ್ವರಕ್ಕೆ ಆಗಮಿಸಿದ್ದ ದಂಪತಿಗಳು, ತಮ್ಮ ಪುತ್ರನಿಗಾಗಿ ಒಂದರ ನಂತರ ಒಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಆ ದಂಪತಿಗಳು ಸ್ಥಳೀಯ ದೂರದರ್ಶನ ವಾಹಿನಿಯೊಂದರ ಸಂಪರ್ಕಕ್ಕೆ ಬಂದು, ಆತ ಅವರ ಅಳಲನ್ನು ವರದಿ ಮಾಡಿದ್ದರು.

"ಈ ವರದಿಯನ್ನು ವಾಹಿನಿಯಲ್ಲಿ ವೀಕ್ಷಿಸಿದ್ದ ಬಾಲಕನು ತನ್ನ ಪೋಷಕರ ಗುರುತು ಹಿಡಿದಿದ್ದ. ನಂತರ ಆತ ಈ ಕುರಿತು ಆಸ್ಪತ್ರೆಯ ಪ್ರಾಧಿಕಾರಗಳಿಗೆ ಮಾಹಿತಿ ನೀಡಿದ್ದ. ಇದಾದ ನಂತರ ಆಸ್ಪತ್ರೆಯು ದೂರದರ್ಶನ ವಾಹಿನಿಯ ಕಚೇರಿಗೆ ಕರೆ ಮಾಡಿ, ಆ ಸಂದರ್ಶನದ ವಿಡಿಯೊಗಳನ್ನು ಪಡೆದಿತ್ತು. ಆ ವಿಡಿಯೊಗಳನ್ನು ಮತ್ತೆ ರಮಾನಂದನಿಗೆ ತೋರಿಸಿ ಅವರೇ ಆತನ ಪೋಷಕರು ಎಂಬ ಸಂಗತಿಯನ್ನು ದೃಢಪಡಿಸಿಕೊಂಡಿತ್ತು. ನಂತರ ಆಸ್ಪತ್ರೆ ಪ್ರಾಧಿಕಾರವು ರಮಾನಂದನನ್ನು ಆತನ ಪೋಷಕರೊಂದಿಗೆ ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು" ಎಂದು ಎಸ್‌ಸಿಬಿ ವೈದ್ಯಕೀಯ ಕಾಲೇಜಿನ ತುರ್ತು ಪರಿಸ್ಥಿತಿ ಅಧಿಕಾರಿ ಡಾ. ಬಿ.ಎನ್.ಮೋಹರನ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆಸ್ಪತ್ರೆಯು, "ಬಾಲೇಶ್ವರ್ ರೈಲು ದುರಂತದ ಸಂತ್ರಸ್ತನಾದ ನೇಪಾಳದ 15 ವರ್ಷದ ರಮಾನಂದ ಪಾಸ್ವಾನ್ ತನ್ನ ಪೋಷಕರನ್ನು ಪವಾಡಸದೃಶ ರೀತಿಯಲ್ಲಿ ಒಂದುಗೂಡಿರುವುದು ನಮ್ಮ ಪಾಲಿಗೆ ಭಾವುಕ ಕ್ಷಣವಾಗಿದೆ" ಎಂದು ಹೇಳಿದೆ.

ಜೂನ್ 2ರ ರಾತ್ರಿ 7 ಗಂಟೆ ಸಮಯದಲ್ಲಿ ಲೂಪ್ ಹಳಿಯಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಗುದ್ದಿತ್ತು. ಇದರಿಂದ ಅದರ ಕೆಲವು ಬೋಗಿಗಳು ಅದೇ ಸಮಯದಲ್ಲಿ ಬೆಂಗಳೂರಿನಿಂದ ಹೌರಾಗೆ ಸಾಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಗುಚಿಕೊಂಡು ಬಿದ್ದಿದ್ದವು. ಈ ಅಪಘಾತದಲ್ಲಿ ಒಟ್ಟಾರೆ 288 ಮಂದಿ ಸಾವಿಗೀಡಾಗಿದ್ದು, 1200ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ.

Similar News