ಸರಕಾರಿ ಕಾಲೇಜು, ವಿವಿಗಳಲ್ಲಿಯೂ ಇಂದಿರಾ ಕ್ಯಾಂಟೀನ್ ತೆರೆಯಲು ಕೂಗು: ಸಿಎಂಗೆ ಪತ್ರ

Update: 2023-06-08 14:17 GMT

ಬೆಂಗಳೂರು, ಜೂ.8: ರಾಜ್ಯದ ಜನತೆಯ ಹಸಿವನ್ನು ಇಂಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ ‘ಇಂದಿರಾ ಕ್ಯಾಂಟೀನ್’ ಯೋಜನೆ ಮಧ್ಯಮ ಮತ್ತು ಬಡಜನರ ಬದುಕಿಗೆ ಆಧಾರವಾಯಿತು. ಈ ಹಿನ್ನೆಲೆ ರಾಜ್ಯಾದ್ಯಂತ ಕಡಿಮೆ ಹಣದಲ್ಲಿ ಊಟ, ತಿಂಡಿಯನ್ನು ಒದಗಿಸುವ ಇಂದಿರಾ ಕ್ಯಾಂಟೀನ್‍ಗಳು ಸ್ಥಾಪನೆಗೊಂಡವು. ಈಗ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕ್ಯಾಂಟೀನ್‍ಗಳನ್ನು ತೆರೆದು, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ರಾಜ್ಯದ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ.

ರಾಜ್ಯದಲ್ಲಿ ಸುಮಾರು 24ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು, 3,800ಕ್ಕೂ ಹೆಚ್ಚು  ಸರಕಾರಿ ಕಾಲೇಜುಗಳಿವೆ. ಇವುಗಳಲ್ಲಿ ಅಂದಾಜು 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸರಕಾರ ಅಂಕಿ ಅಂಶಗಳ ಆಧಾರವಾಗಿ ತುರ್ತು ಅಗತ್ಯವೆನ್ನಿಸುವ, ಹೆಚ್ಚಿನ ವಿದ್ಯಾರ್ಥಿಗಳಿರುವ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳನ್ನು ತೆರೆದರೆ ಅದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಇನ್ನು ಗ್ರಾಮೀಣ ಭಾಗಗಳಿಂದ ಬರುವ ಸರಕಾರಿ ಕಾಲೇಜುಗಳಲ್ಲಿನ ಬಹುತೇಕ ವಿದ್ಯಾರ್ಥಿಗಳು ಹಣಕಾಸು, ವೈಯಕ್ತಿಕ ತೊಂದರೆಗಳ ನಡುವೆ ತಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಾಗಿ ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರು ಆರ್ಥಿಕವಾಗಿ ಹಿಂದುಳಿದಿರುವ ಹಿನ್ನೆಲೆಯಿಂದ ಬಂದವರಾಗಿದ್ದು, ಕಾಲೇಜುಗಳಲ್ಲಿ ಸರಿಯಾದ ಕ್ಯಾಂಟೀನ್ ವ್ಯವಸ್ಥೆಯಿಲ್ಲದೆ ಮಧ್ಯಾಹ್ನದ ಆಹಾರಕ್ಕೆ ಕುತ್ತು ಬಿದ್ದಂತಾಗಿದೆ. 

ಕೆಲವು ವಿದ್ಯಾರ್ಥಿಗಳು ವೈಯಕ್ತಿಕ ಕಾರಣದಿಂದ ಮನೆಯಿಂದ ಊಟದ ಬುತ್ತಿಯನ್ನೂ ತರಲಾಗುವುದಿಲ್ಲ. ಕಾಲೇಜು ಸಮಯಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಬೆಳಗ್ಗಿನ ಉಪಹಾರ ಸೇವಿಸದೇ ಬರುವುದೂ ಇದೆ. ಇನ್ನು ಮಧ್ಯಾಹ್ನ ಹೋಟೆಲ್‍ಗಳಲ್ಲಿ ಊಟ ಮಾಡಬಹುದೆಂದರೆ ದಿನವೂ ಹಣ ಕೊಟ್ಟು ಊಟ ಮಾಡಲು ಹೆಚ್ಚಿನ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಹಣವಿದ್ದರೂ ಕೆಲವು ಕಾಲೇಜುಗಳಲ್ಲಿ ಕ್ಯಾಂಟೀನ್‍ಗಳೇ ಇರುವುದಿಲ್ಲ. ಕೆಲವು ಕಡೆಗಳಲ್ಲಿ ಸರಕಾರಿ ಕಾಲೇಜುಗಳ ಕಟ್ಟಡ ನಗರ ಪ್ರದೇಶಕ್ಕೆ ದೂರವಿರುವುದರಿಂದ ಕಾಲೇಜಿನ ಅಕ್ಕಪಕ್ಕದಲ್ಲಿ ಅಂಗಡಿ, ಹೋಟೆಲ್‍ಗಳು ಸಹ ಇರುವುದಿಲ್ಲ. ಹೀಗಾಗಿ ಕಾಲೇಜು ಆವರಣಗಳಲ್ಲೇ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಆರಂಭವಾಗಬೇಕು ಎನ್ನುತ್ತಾರೆ ವಿದ್ಯಾರ್ಥಿ ಜ್ಞಾನೇಶ್. 

ಸರಕಾರ ಕ್ಯಾಂಟೀನ್‍ಗಳನ್ನು ಸ್ಥಾಪಿಸಿದರೆ ಅನೇಕ ಬಡ ವಿದ್ಯಾರ್ಥಿಗಳಿಗೆ ಆಹಾರ ದೊರಕುವ ಜತೆಗೆ ಇಲ್ಲಿ ಪೌಷ್ಟಿಕ ಆಹಾರ ದೊರಕುವುದರಿಂದ ವಿದ್ಯಾರ್ಥಿಗಳು ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ. ಸರಕಾರಿ ಕಾಲೇಜುಗಳಲ್ಲಿ ಮಧ್ಯಾಹ್ನದ ಊಟ ಸುಲಭ ದರದಲ್ಲಿ ಲಭ್ಯವಾದಲ್ಲಿ ಸರಕಾರಿ ಕಾಲೇಜುಗಳ ಶಿಕ್ಷಣದ ಪ್ರವೇಶವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಬಾಗಲಕೋಟೆಯ ವಿದ್ಯಾರ್ಥಿ ಕರಣ್‍ಮೌರ್ಯ.'ಈ ಕುರಿತು ಸರಕಾರ ರಾಜ್ಯದ ಎಲ್ಲ ಸರಕಾರಿ ಕಾಲೇಜು, ವಿವಿಗಳ ಪರಾಮರ್ಶೆ ನಡೆಸಿ ವಿದ್ಯಾರ್ಥಿಗಳ ಬೇಡಿಕೆಯನ್ನು ಪರಿಗಣಿಸಿ ಕ್ಯಾಂಟೀನ್‍ಗಳನ್ನು ಸ್ಥಾಪಿಸಬೇಕು. ಈ ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿಯನ್ನು ನಡೆಸುವ ಯೋಚನೆಯಿದೆ ಎನ್ನುತ್ತಾರೆ ಸಂವಾದ ಸಂಸ್ಥೆಯ ಸದಸ್ಯ ಪ್ರಾಣೇಶ್ ನೆಲ್ಯಾಡಿ. 

ಮುಖ್ಯಮಂತ್ರಿಗಳಿಗೆ ಪತ್ರ !

ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ವಿವಿಗಳ ಆವರಣಗಳಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯ ಕ್ಯಾಂಟೀನ್‍ಗಳನ್ನು ಸ್ಥಾಪಿಸಬೇಕೆಂದು ಸಂವಾದ ಸಂಸ್ಥೆಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು, ವಿದ್ಯಾರ್ಥಿಗಳ ಅಹವಾಲನ್ನು ಪರಿಗಣಿಸಬೇಕೆಂದು ಒತ್ತಾಯಿಸಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ಈ ರೀತಿಯಲ್ಲಿದ್ದು, “ಮೊದಲನೆಯದಾಗಿ ರಾಜ್ಯದ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ಸಂವಿಧಾನದ ಮೌಲ್ಯಗಳ ನೆಲೆಯಿಂದ ರಾಜ್ಯದ ಜನತೆಯ ಹಿತ ಕಾಪಾಡುವ ತಮ್ಮ ಪ್ರಯತ್ನದಲ್ಲಿ ನಾಗರಿಕರಾಗಿ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳಲ್ಲೊಂದಾದ ಊಟದ ಅವಶ್ಯಕತೆಗಳಿಗೆ ಸಂಬಂಧಿಸಿದ ಪ್ರಮುಖ ವಿಷಯವನ್ನು ಮುಖ್ಯಮಂತ್ರಿಗಳಾದ ನಿಮ್ಮ ಗಮನಕ್ಕೆ ತರಲು ಈ ಪತ್ರ ಬರೆಯಲಾಗುತ್ತಿದ್ದು, ಸರಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸಮಸ್ಯೆಗಳು ಉಂಟಾಗಿವೆ. ಅದರಲ್ಲಿ ಪ್ರಮುಖವಾಗಿ ಮಧ್ಯಾಹ್ನದ ಊಟದ ಸಮಸ್ಯೆಯೂ ಒಂದು. ತಾವು ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಯೋಜನೆ ರಾಜ್ಯದಲ್ಲಿ ಹೆಚ್ಚು ಅವಶ್ಯಕವಾಗಿ ಪರಿಣಮಿಸಿದೆ''

''ಈ ಹಿನ್ನೆಲೆ ಇದೇ ಮಾದರಿಯಲ್ಲಿ ಸರಕಾರಿ ಕಾಲೇಜು, ವಿವಿಗಳಲ್ಲಿ ಕ್ಯಾಂಟೀನ್‍ಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇದರಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕೆ ಸಹಕಾರಿಯಾಗಲಿದ್ದು, ಇಂದಿರಾ ಕ್ಯಾಂಟೀನ್‍ನಂತಹ ಕಾರ್ಯಕ್ರಮದ ಮಾದರಿಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಬೇಕು” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸರಕಾರಿ ಕಾಲೇಜು ಹಾಗೂ ವಿವಿಗಳಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯ ಕ್ಯಾಂಟೀನ್ ಸ್ಥಾಪನೆಯಾದರೆ ಗ್ರಾಮೀಣ ಭಾಗದ ಬಡ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸರಕಾರ ವಿದ್ಯಾರ್ಥಿಗಳ ಕೋರಿಕೆಯನ್ನು ಪರಿಗಣಿಸಿ ಸುಲಭ ದರದಲ್ಲಿ ಊಟ, ತಿಂಡಿಯನ್ನು ನೀಡುವ ಕ್ಯಾಂಟೀನ್‍ಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಮುಂದಾಗಬೇಕು. ಈ ಮಾದರಿಯನ್ನು ಮೊದಲಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ ರಾಜ್ಯದ ಸುಮಾರು 20 ಸರಕಾರಿ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಕ್ಯಾಂಟೀನ್ ತೆರೆದು ಅದರ ಯಶಸ್ಸಿನ ಬಳಿಕ ರಾಜ್ಯಾದ್ಯಂತ ವಿಸ್ತರಿಸಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆ, ಪೌಷ್ಠಿಕಾಂಶ ಕೊರತೆ ಎಲ್ಲವನ್ನು ತಗ್ಗಿಸಬಹುದು. 

-ಪ್ರಾಣೇಶ್ ನೆಲ್ಯಾಡಿ. ಸಂವಾದ ಸಂಸ್ಥೆ, ಮಂಗಳೂರು


ಗ್ರಾಮೀಣ ಪ್ರದೇಶಗಳಿಂದ ಬರುವ ನಮ್ಮಂತಹ ಸಾಕಷ್ಟು ವಿದ್ಯಾರ್ಥಿಗಳಿಗೆ ಈ ರೀತಿಯ ಕ್ಯಾಂಟೀನ್‍ನಿಂದ ಬಹಳಷ್ಟು ಅನುಕೂಲವಾಗುತ್ತದೆ. ಹಳ್ಳಿಗಳಿಂದ ಕಾಲೇಜು ಸಮಯಕ್ಕೆ ಬರುವ ಧಾವಂತದಲ್ಲಿ ತಿಂಡಿ, ಊಟ ಸಮಸ್ಯೆ ಉಂಟಾಗುತ್ತಿದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಪರೀಕ್ಷೆ ಸಂದರ್ಭದಲ್ಲಂತೂ ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದೇವೆ. ಎಲ್ಲ ಕುಟುಂಬದಲ್ಲೂ ಪ್ರತಿದಿನ ಊಟಕ್ಕೆ ಹಣ ಕೊಡಲು ಶಕ್ತರಿರುವುದಿಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಬೇಕು.

-ಜಯಶ್ರೀ ಸರಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ.

Similar News