ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತ ವಿರುದ್ಧ ಆಸ್ಟ್ರೇಲಿಯ 469 ರನ್ ಗಳಿಸಿ ಆಲೌಟ್

ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ ಶತಕ, ಮುಹಮ್ಮದ್ ಸಿರಾಜ್‌ಗೆ 4 ವಿಕೆಟ್

Update: 2023-06-08 13:46 GMT

ದಿ ಓವಲ್, ಜೂ.8: ಟ್ರಾವಿಸ್  ಹೆಡ್(163 ರನ್, 174 ಎಸೆತ) ಹಾಗೂ ಸ್ಟೀವನ್ ಸ್ಮಿತ್(121 ರನ್, 268 ಎಸೆತ)ಶತಕದ ಹೊರತಾಗಿಯೂ ವೇಗದ ಬೌಲರ್ ಮುಹಮ್ಮದ್ ಸಿರಾಜ್(4-108)ನೇತೃತ್ವದ ಬೌಲರ್‌ಗಳ ನಿಖರ ದಾಳಿಗೆ ವಿಚಲಿತವಾದ ಆಸ್ಟ್ರೇಲಿಯ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ 469 ರನ್ ಗಳಿಸಿ ಆಲೌಟಾಗಿದೆ.

 ಬೃಹತ್ ಮೊತ್ತ ಗಳಿಸುವ ಗುರಿಯೊಂದಿಗೆ 2ನೇ ದಿನದಾಟವಾದ ಗುರುವಾರ 3 ವಿಕೆಟ್‌ಗಳ ನಷ್ಟಕ್ಕೆ 327 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ನಿನ್ನೆಯ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು.

95 ರನ್ ಗಳಿಸಿದ್ದ ಸ್ಮಿತ್ ಇಂದು ಶತಕ ಪೂರೈಸಿದರು. 146 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹೆಡ್ 163 ರನ್ ಗಳಿಸಿ ಮುಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಹೆಡ್ ವಿಕೆಟನ್ನು ಕಬಳಿಸಿದ ಸಿರಾಜ್ 4ನೇ ವಿಕೆಟ್‌ಗೆ 285 ರನ್ ಜೊತೆಯಾಟವನ್ನು ಮುರಿದರು.

ಈ ಇಬ್ಬರು ಔಟಾದ ನಂತರ ಅಲೆಕ್ಸ್ ಕ್ಯಾರೆ (48 ರನ್, 69 ಎಸೆತ) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (9 ರನ್, 34 ಎಸೆತ) 8ನೇ ವಿಕೆಟ್‌ಗೆ 51 ರನ್ ಸೇರಿಸಿದರು. ಆಸ್ಟ್ರೇಲಿಯದ ಮೊತ್ತವನ್ನು 450ರ ಗಡಿ ದಾಟಿಸಿದರು.
 
ನಥಾನ್ ಲಿಯೊನ್‌ರನ್ನು(9 ರನ್) ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ 50ನೇ ವಿಕೆಟ್ ಪೂರೈಸಿದರು. ಕಮಿನ್ಸ್ ವಿಕೆಟನ್ನು ಕಬಳಿಸಿದ ಸಿರಾಜ್ ಆಸ್ಟ್ರೇಲಿಯ ಇನಿಂಗ್ಸ್‌ಗೆ ತೆರೆ ಎಳೆದರು. ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ಕ್ಯಾಚ್ ಪಡೆದರು.

ಭಾರತದ ಪರ ಸಿರಾಜ್(4-108)ಯಶಸ್ವಿ ಬೌಲರ್ ಎನಿಸಿಕೊಂಡರು. ಶಾರ್ದೂಲ್ ಠಾಕೂರ್(2-83) ಹಾಗೂ ಮುಹಮ್ಮದ್ ಶಮಿ(2-122)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
 

Similar News