ಮಧ್ಯಪ್ರದೇಶ: ಬೋರ್ ವೆಲ್ ಗೆ ಬಿದ್ದ 2 ವರ್ಷದ ಹೆಣ್ಣು ಮಗು ಸಾವು

Update: 2023-06-09 06:14 GMT

ಭೋಪಾಲ: ಮಧ್ಯಪ್ರದೇಶದಲ್ಲಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಮಗುವನ್ನು ಎರಡು ದಿನಗಳ ಬಳಿಕ ಮೇಲಕ್ಕೆತ್ತಲಾಗಿದ್ದು, ಅದು ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಭೋಪಾಲದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಸೆಹೋರೆಯಲ್ಲಿ ಈ ದುರ್ಘಟನೆ ನಡೆದಿದೆ. ಮಗುವಿನ ಕೊಳೆತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾವಲಿ ಗ್ರಾಮದಲ್ಲಿ ಮಂಗಳವಾರ ಅಪರಾಹ್ನ ಸುಮಾರು 1 ಗಂಟೆಗೆ ಹೆಣ್ಣು ಮಗು ಸೃಷ್ಟಿ ಬೋರ್‌ವೆಲ್‌ಗೆ ಬಿದ್ದಿತ್ತು. ಆಕೆಯನ್ನು ಗುರುವಾರ ಸಂಜೆ 5.30ಕ್ಕೆ ಹೊರೆ ತೆಗೆಯಲಾಗಿತ್ತು. ಅನಂತರ ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.

ಆರಂಭದಲ್ಲಿ ಮಗು ಬೋರ್‌ವೆಲ್‌ ನ ಸುಮಾರು 40 ಅಡಿಯಲ್ಲಿ ಸಿಲುಕಿತ್ತು. ಆದರೆ, ರಕ್ಷಣಾ ಕಾರ್ಯಾಚರಣೆ ಸಂದರ್ಭ ಮೆಷಿನ್ ಗಳ ಕಂಪನದಿಂದ ಸುಮಾರು 100 ಅಡಿ ಆಳಕ್ಕೆ ಬಿತ್ತು. ಇದರಿಂದ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಕಷ್ಟಕರವಾಯಿತು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಧವಾರ ತಿಳಿಸಿದ್ದರು. ರಾಷ್ಟ್ರೀಯ ವಿಪತ್ತ ಸ್ಪಂದನಾ ಪಡೆ (NDRF), ರಾಜ್ಯ ವಿಪತ್ತು ತುರ್ತು ಸ್ಪಂದನಾ ಪಡೆ (SDERF), ಸೇನೆ ಹಾಗೂ ರೋಬೋಟ್ ತಜ್ಞರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.

Similar News