×
Ad

ಗುಜರಾತ್‌: ಮಾಂಸಾಹಾರ ಮಾರಾಟ ಮಾಡಿದಕ್ಕೆ ನಾಗಾಲ್ಯಾಂಡ್‌ ನ ಇಬ್ಬರಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

Update: 2023-06-09 15:59 IST

ಅಹ್ಮದಾಬಾದ್: ಗುಜರಾತ್‌ ನ ಅಹ್ಮದಾಬಾದ್‌ನಲ್ಲಿ ಮಾಂಸಾಹಾರಿ ಮತ್ತು ಈಶಾನ್ಯ ಭಾರತದ ಆಹಾರವನ್ನು ಮಾರಾಟ ಮಾಡಿದ್ದಕ್ಕಾಗಿ ಗುಂಪೊಂದು ನಾಗಾಲ್ಯಾಂಡ್‌ನ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿದ  ಘಟನೆ ನಡೆದಿದೆ ಎಂದು The Print  ವರದಿ ಮಾಡಿದೆ.

ನಗರದ ಚಾಣಕ್ಯಪುರಿ ಪ್ರದೇಶದ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ವೇಳೆ ರೊವಿಮೆಝೊ ಕೆಹೀ ಮತ್ತು ಮಪುಯಂಗೆರ್‌ ಜಮೀರ್‌ ಎಂಬವರ ಮೇಲೆ ಜೂನ್‌ 4ರಂದು ದಾಳಿ ನಡೆದಿದೆ.

ಜಮೀರ್‌ನೊಂದಿಗೆ ಕೆಲ ಜನರು ಜಗಳವಾಡುತ್ತಿದ್ದಾರೆಂದು ಮಾಲಕ ಹಿರೇನ್‌ ಪಟೇಲ್‌ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಕರೆ ಮಾಡಿ ತಿಳಿಸಿದಾಗ ಕೆಹೀ ಅಲ್ಲಿಗೆ ಧಾವಿಸಿದ್ದರು. ಅಲ್ಲಿ ಸೇರಿದ್ದ ಕೆಲವರು ಇಬ್ಬರಿಗೂ ಬೇಸ್‌ಬಾಲ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿದರಲ್ಲದೆ ಮಧ್ಯಪ್ರವೇಶಿಸಲೆತ್ನಿಸಿದ ಗ್ರಾಹಕರೊಬ್ಬರಿಗೂ ಥಳಿಸಿದ್ದರು ಎಂದು ವರದಿಯಾಗಿದೆ.

ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಗುಜರಾತ್‌ನಲ್ಲಿ ನಾವು ಹೇಗೆ ಮಾಂಸಾಹಾರಿ ಆಹಾರ ಹಾಗೂ ಈಶಾನ್ಯ ಭಾರತದ ಆಹಾರ ಮಾರಾಟ ಮಾಡುತ್ತಿದ್ದೇವೆ ಎಂದು ಸುಮಾರು 10ರಷ್ಟಿದ್ದ ದಾಳಿಕೋರರು ಪ್ರಶ್ನಿಸಿದ್ದರು ಎಂದು ಸಂತ್ರಸ್ತರು ದೂರಿದ್ದಾರೆ.

ಘಟನೆ ಕುರಿತು ಎಫ್‌ಐಆರ್‌ ದಾಖಲಿಸಲಾಗಿದ್ದು ಒಬ್ಬ ಆರೋಪಿ ಪ್ರತೀಕ್‌ ಧೋಬಿ ಎಂಬಾತನನ್ನು ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳನ್ನು ಮಹಾವೀರ್‌ ಮತ್ತು ರೊಕ್ಡೊ ಎಂದು ಗುರುತಿಸಲಾಗಿದೆ.

ಈ ಘಟನೆಯನ್ನು ಕಳವಳಕಾರಿ ಎಂದು ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೇಫಿಯು ರಿಯೋ ಬಣ್ಣಿಸಿದ್ದಾರೆ. ಪರಸ್ಪರರ ಸಾಂಸ್ಕೃತಿಕ ಅಸ್ಮಿತೆ ಮತ್ತು ಆಹಾರ ಆಯ್ಕೆಗಳನ್ನು ನಾವು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ.

ನಾಗಾಲ್ಯಾಂಡ್‌ ಬಿಜೆಪಿ ಅಧ್ಯಕ್ಷ ತೆಮ್ಜೆನ್‌ ಇಮ್ನಾ ಅಲೊಂಗ್‌ ಕೂಡ ಪ್ರತಿಕ್ರಿಯಿಸಿ ಘಟನೆಯಿಂದ ನೋವಾಗಿದೆ ಎಂದಿದ್ದಾರೆ.

Similar News