ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸರ್ವ ಕ್ರಮ: ಉಡುಪಿ ಡಿಸಿ ಕೂರ್ಮಾರಾವ್

Update: 2023-06-09 13:57 GMT

ಉಡುಪಿ, ಜೂ.9: ಕರಾವಳಿ ಜಿಲ್ಲೆಗಳಲ್ಲಿ ಎಪ್ರಿಲ್-ಮೇ ತಿಂಗಳ ಮುಂಗಾರು ಪೂರ್ವ ಮಳೆ ಹಾಗೂ ಜೂನ್ ತಿಂಗಳಲ್ಲಿ ಇದುವರೆಗೆ ಮುಂಗಾರು ಮಳೆಯ ತೀವ್ರ ಕೊರತೆ ಕಂಡಬಂದಿರುವುದರಿಂದ ಉಡುಪಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ. ಇದರ ಪರಿಹಾರಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಎಪ್ರಿಲ್ ತಿಂಗಳಲ್ಲಿ ವಾಡಿಕೆ ಮಳೆ 26 ಮಿ.ಮೀ. ಆಗಿದ್ದರೆ ಈ ಬಾರಿ ಕೇವಲ 6ಮಿ.ಮೀ. ಮಳೆ ಸುರಿದು ಶೇ.79ರಷ್ಟು ಕೊರತೆ ಕಂಡುಬಂದಿತ್ತು. ಅದೇ ರೀತಿ ಮೇ ತಿಂಗಳಲ್ಲಿ ವಾಡಿಕೆಯಂತೆ 165ಮಿ.ಮೀ. ಮುಂಗಾರು ಮಳೆ ಆಗಬೇಕಿದ್ದಲ್ಲಿ ಕೇವಲ 45ಮಿ.ಮೀ. ಮಳೆಯಾಗಿದ್ದು ಶೇ.73ರಷ್ಟು  ಕೊರತೆ ಕಂಡುಬಂದಿದೆ.

ಅದೇ ರೀತಿ ಜೂನ್ ತಿಂಗಳ ಆರಂಭದಿಂದ ಮುಂಗಾರು ಪ್ರಾರಂಭಗೊಳ್ಳಬೇಕಿದ್ದು, ಇದುವರೆಗೆ ಶೇ.90ರಷ್ಟು ಮಳೆಯ ಕೊರತೆ ಉಂಟಾಗಿದೆ. ಮಳೆಯ ಕೊರತೆಯಿಂದ ಜಿಲ್ಲೆಯ ಜಲಮೂಲಗಳು ಬತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಇದರ ಪ್ರಭಾವ ಕಾಣಿಸಿಕೊಂಡಿದೆ. ಇದನ್ನು ಎದುರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾಡಳಿತ ಆದ್ಯತೆಯ ಮೇಲೆ ಜಲಮೂಲಗಳ ಪುನರುಜ್ಜೀವನಕ್ಕೆ ತುರ್ತುಗಮನ ಹರಿಸಿದೆ. ತೆರೆದ ಬಾವಿಗಳನ್ನು ಸ್ವಚ್ಛಗೊಳಿಸುವುದು, ಹೂಳೆತ್ತುವುದಕ್ಕೆ ಒತ್ತು ನೀಡಿದೆ. ಕೊಳವೆ ಬಾವಿಗಳ ಪುನರುಜ್ಜೀವನಗೊಳಿಸಲಾಗಿದೆ. ಇದು ತುಂಬಾ ಪ್ರದೇಶಗಳಲ್ಲಿ ಒಳ್ಳೆಯ ಫಲಿತಾಂಶ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನದಿ ಹಾಗೂ ಅಣೆಕಟ್ಟುಗಳು ಜಲಮೂಲ ಇರುವಲ್ಲಿ ನೀರಿನ ಕೊರತೆ ಕಂಡುಬಂದಿದೆ. ಉಡುಪಿಗೆ ನೀರು ಸರಬರಾಜು ಮಾಡುವ ಬಜೆಯಲ್ಲಿ ನೀರಿನ ಕೊರತೆಯಿದೆ. ಇಲ್ಲಿ ದೂರದ ಗುಂಡಿಗಳಿಂದ ನೀರನ್ನು ಪಂಪ್ ಮಾಡಿ ಬಜೆಗೆ ತರಲಾಗುತ್ತಿದೆ. ಅದನ್ನು ರೇಷನಿಂಗ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದರು.

ಎತ್ತರ ಪ್ರದೇಶದ ಜನರಿಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಯಾಗದಂತೆ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಇನ್ನು ಶಾಲಾ-ಕಾಲೇಜುಗಳಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ನೀರನ್ನು ನೀಡಲಾಗುತ್ತಿದೆ ಎಂದು ಕೂರ್ಮಾರಾವ್ ವಿವರಿಸಿದರು.

ಜಿಲ್ಲೆಯ ಜನರಿಗೆ ತಮ್ಮ ಜಲಮೂಲಗಳ ಪುನರುಜ್ಜೀವನಕ್ಕೆ ಅಗತ್ಯಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಜಿಲ್ಲಾಧಿಕಾರಿ, ಇಷ್ಟಾಗಿಯೂ ಸಮಸ್ಯೆ ತಲೆದೋರಿದಲ್ಲಿ ದಿನದ 24ಗಂಟೆ ಕಾರ್ಯಾಚರಿಸುವ ನಮ್ಮ ಸಹಾಯವಾಣಿ ಸಂಖ್ಯೆ 1077ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು. ಜಿಪಂ ಹಾಗೂ ತಾಪಂಗಳಲ್ಲೂ ಸಹಾಯವಾಣಿಗಳಿದ್ದು, ಅವುಗಳನ್ನು ಅಗತ್ಯ ಸಂದರ್ಭದಲ್ಲಿ ಸಂಪರ್ಕಿಸುವಂತೆ ತಿಳಿಸಿದರು.

ಬಜೆ ಡ್ಯಾಂನ ಪರಿಸ್ಥಿತಿಯನ್ನು ಪ್ರತಿದಿನ ಅವಲೋಕಿಸಲಾಗುತ್ತಿದೆ. ರೇಷನಿಂಗ್‌ನಿಂದಾಗಿ ಅಲ್ಲಿನ ನೀರು ಇನ್ನು ಎರಡು ವಾರ ಬರುವ ನಿರೀಕ್ಷೆ ಇದೆ. ನದಿಯಲ್ಲಿ ಇನ್ನಷ್ಟು ಕಡೆ ಇರುವ ಗುಂಡಿಗಳಿಂದ ನೀರನ್ನು ಪಂಪಿಂಗ್ ಮಾಡಲು ಸಂಬಂಧಿತ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

Similar News