ಜೂ.18ಕ್ಕೆ ಉಡುಪಿಯಲ್ಲಿ ವೈವಿಧ್ಯಮಯ ಜಾನಪದ ಸ್ಪರ್ಧೆ

Update: 2023-06-09 13:59 GMT

ಉಡುಪಿ, ಜೂ.9: ನಾಡಿನ ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಸಮಿತಿ, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದೊಂದಿಗೆ ವೈವಿಧ್ಯಮಯ ಜಾನಪದ ಸ್ಪರ್ಧೆಯೊಂದನ್ನು ಜೂ.18ರಂದು ಆಯೋಜಿಸಿದೆ ಎಂದು ಜಿಲ್ಲಾ ಸಮಿತಿ ಹಾಗೂ ಟ್ರಸ್ಟ್‌ನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಇಂದಿಲ್ಲಿ ಕರೆದ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ 18ರಿಂದ 50ವರ್ಷದೊಳಗಿನ ವಯೋಮಿತಿಯ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ವೈಯಕ್ತಿಕ ವಿಭಾಗದಲ್ಲಿ ಗಾದೆ-ಒಗಟು ಹೇಳುವ ಸ್ಪರ್ಧೆ ಹಾಗೂ ಜಾನಪದ ಗೀತೆ ಸ್ಪರ್ಧೆಗಳಿದ್ದರೆ, ಗುಂಪು ವಿಭಾಗ (ಸಮೂಹ) ದಲ್ಲಿ ಜಾಪನದ ಗೀತೆ, ಜಾನಪದ ವಾದ್ಯ ಹಾಗೂ ಜಾನಪದ ನೃತ್ಯ ಸ್ಪರ್ಧೆಳಿವೆ ಎಂದು ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ವೈಯಕ್ತಿಕ ಸ್ಪರ್ಧೆಗಳ ಮೊದಲ ಮೂರು ಸ್ಥಾನಗಳ ವಿಜೇತರಿಗೆ ಕ್ರಮವಾಗಿ 3,000ರೂ, 2,000ರೂ. ಹಾಗೂ 1,000ರೂ.ನಗದು ಬಹುಮಾನವಿದ್ದರೆ, ಸಮೂಹದ ಜಾನಪದ ಗೀತೆ ಮತ್ತು ಜಾನಪದ ವಾದ್ಯ ಸ್ಪರ್ಧೆಗೆ ಕ್ರಮವಾಗಿ  5,000ರೂ., 3,000ರೂ., 2,000ರೂ.ಬಹುಮಾನವಿದೆ. ಜಾನಪದ ನೃತ್ಯ ಸ್ಪರ್ಧೆ ವಿಜೇತರಿಗೆ 10,000ರೂ., 7,500ರೂ. ಹಾಗೂ 5,000ರೂ. ನಗದು ಬಹುಮಾನವಿದೆ ಎಂದವರು ವಿವರಿಸಿದರು.

ಒಂದು ತಂಡದಲ್ಲಿ ಕನಿಷ್ಠ ಮೂರರಿಂದ ಗರಿಷ್ಠ ಆರು ಮಂದಿ ಇರಬಹುದು. ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಜೂ.15 ಕೊನೆಯ ದಿನವಾಗಿರು ತ್ತದೆ. ಭಾಗವಹಿಸುವ ಸ್ಪರ್ಧಿಗಳು ಜೂ.18ರಂದು ಬೆಳಗ್ಗೆ ಸ್ಪರ್ಧೆ ನಡೆಯುವ ಅಂಬಾಗಿ ಲಿನ ಅಮೃತಗಾರ್ಡನ್‌ನಲ್ಲಿ ಹಾಜರಿರಬೇಕು ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಅರ್ಜಿಗಳನ್ನು ಅನುಷ ಆಚಾರ್ಯ, ತಲ್ಲೂರ್ಸ್ ತಾಂಬೂಲಂ ಕಂಫರ್ಟ್ ಟವರ್, ಕಲ್ಪನ ಚಿತ್ರ ಮಂದಿರದ ಎದುರು, ಉಡುಪಿ-576101 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ರವಿರಾಜ್ ನಾಯಕ್, ಖಜಾಂಚಿ ಪ್ರಶಾಂತ ಭಂಡಾರಿ ಹಾಗೂ ಅನುಷ ಆಚಾರ್ಯ ಉಪಸ್ಥಿತರಿದ್ದರು.

Similar News