‘ಅಖಂಡ ಭಾರತ’ಕ್ಕೆ ಪ್ರತಿಯಾಗಿ ’ಗ್ರೇಟರ್ ನೇಪಾಳ’ದ ನಕಾಶೆ ಹಾಕಿದ ಕಠ್ಮಂಡು ಮೇಯರ್!

Update: 2023-06-09 15:56 GMT

ಕಠ್ಮಂಡು (ನೇಪಾಳ): ಕಠ್ಮಂಡು ಮೆಟ್ರೊಪಾಲಿಟನ್ ಸಿಟಿ ಮೇಯರ್ ಬಲೇಂದ್ರ ಶಾ ತನ್ನ ಕಚೇರಿಯಲ್ಲಿ ‘ಗ್ರೇಟರ್ ನೇಪಾಳ’ದ ನಕಾಶೆಯೊಂದನ್ನು ತೂಗು ಹಾಕಿದ್ದಾರೆ ಎಂದು ‘ಕಠ್ಮಂಡು ಪೋಸ್ಟ್’ ವರದಿ ಮಾಡಿದೆ. ಭಾರತೀಯ ಸಂಸತ್ ಭವನದ ನೂತನ ಕಟ್ಟಡದ ಗೋಡೆಯಲ್ಲಿ ‘ಅಖಂಡ ಭಾರತ’ದ ಚಿತ್ರವನ್ನು ಬಿಡಿಸಿರುವುದಕ್ಕೆ ಪ್ರತಿಯಾಗಿ ಅವರು ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನೇಪಾಳ ಭೂಭಾಗವು ಪೂರ್ವ ಹಿಮಾಲಯದ ಟೀಸ್ತಾ ನದಿಯಿಂದ ಪಶ್ಚಿಮದಲ್ಲಿ ಸಟ್ಲೇಜ್ ನದಿವರೆಗೆ ಹಬ್ಬಿದೆ ಎಂದು ‘ಗ್ರೇಟರ್ ನೇಪಾಳ’ದ ಪ್ರತಿಪಾದಕರು ನಂಬುತ್ತಾರೆ. ಆದರೆ, 1816ರಲ್ಲಿ ನೇಪಾಳವು ಸುಗೌಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಈಗ ಈ ಎರಡೂ ಭೂಭಾಗಗಳು ಭಾರತಕ್ಕೆ ಸೇರಿವೆ. ಈ ಒಪ್ಪಂದದ ಬಳಿಕ, ಉಭಯ ದೇಶಗಳ ನಡುವಿನ ಅಂತರ್ರಾಷ್ಟ್ರೀಯ ಗಡಿಯನ್ನು ಗುರುತಿಸಲಾಯಿತು.

ಭಾರತೀಯ ಸಂಸತ್ನಲ್ಲಿರುವ ಭಿತ್ತಿಚಿತ್ರವು ಹಿಂದುತ್ವ ರಾಷ್ಟ್ರೀಯವಾದಿಗಳು ಪ್ರತಿಪಾದಿಸುವ ಕಲ್ಪನೆಯಾಗಿದೆ. ಅವರ ಪ್ರಕಾರ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ದೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಅಖಂಡ ಭಾರತದ ಭಾಗಗಳಾಗಿವೆ.

ಭಾರತೀಯ ಸಂಸತ್ನಲ್ಲಿರುವ ಭಿತ್ತಿ ಚಿತ್ರವು ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧರ ಜನ್ಮ ಸ್ಥಳ ಲುಂಬಿನಿಯನ್ನೂ ತೋರಿಸುತ್ತದೆ. ಕಳೆದ ವಾರ ನೇಪಾಳದ ರಾಜಕೀಯ ನಾಯಕರು ಈ ಭಿತ್ತಿಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ತನ್ನ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳ ಪೈಕಿ ಲುಂಬಿನಿಯೂ ಒಂದು ಎಂಬುದಾಗಿ ನೇಪಾಳ ಪರಿಗಣಿಸುತ್ತದೆ.

‘‘ಭಾರತೀಯ ಸಂಸತ್ನಲ್ಲಿ ಸ್ಥಾಪಿಸಲಾಗಿರುವ ನೂತನ ಭಾರತೀಯ ನಕಾಶೆಯ ವಿಷಯವನ್ನು ನಾವು ಪ್ರಸ್ತಾಪಿಸಿದ್ದೇವೆ’’ ಎಂದು ನೇಪಾಳ ಪ್ರಧಾನಿ ಪುಷ್ಪ ಕಮಾಲ್ ದಹಾಲ್ ಬುಧವಾರ ನೇಪಾಳದ ನ್ಯಾಶನಲ್ ಅಸೆಂಬ್ಲಿಯಲ್ಲಿ ಹೇಳಿದರು ಎಂದು ಪತ್ರಿಕೆ ವರದಿ ಮಾಡಿದೆ. ‘‘ನಾವು ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾವಿಸಿದ್ದೇವೆ. ಆದರೆ, ಅದು ಸಾಂಸ್ಕೃತಿಕ ಮತ್ತು ಐತಿಹಾಸಿಕ ನಕಾಶೆಯೇ ಹೊರತು, ರಾಜಕೀಯ ನಕಾಶೆಯಲ್ಲ ಎಂದು ಭಾರತ ಸ್ಪಷ್ಟೀಕರಣ ನೀಡಿದೆ’’ ಎಂದು ದಹಾಲ್ ಹೇಳಿದರು.

ಗುರುವಾರ, ‘ಗ್ರೇಟರ್ ನೇಪಾಳ’ದ ನಕಾಶೆಯನ್ನು ತನ್ನ ಕಚೇರಿಯಲ್ಲಿ ಹಾಕುವಂತೆ ಶಾ ತನ್ನ ಸಹಾಯಕರಿಗೆ ಸೂಚಿಸಿದರು.

ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳೂ ಈ ಭಿತ್ತಿಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿವೆ.

Similar News