ಫ್ರೆಂಚ್ ಓಪನ್ ಟೆನಿಸ್: ಇಗಾ ಸ್ವಿಯಾಟೆಕ್ ಫೈನಲ್‌ಗೆ, ಮುಚೋವಾ ಎದುರಾಳಿ

Update: 2023-06-09 17:35 GMT

ಫ್ರೆಂಚ್ ಪ್ಯಾರಿಸ್: ಬೀಟ್ರಿಝ್ ಹದ್ದಾದ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪ್ರಶಸ್ತಿ ಸುತ್ತಿನಲ್ಲಿ ಝೆಕ್ ಆಟಗಾರ್ತಿ ಕರೊಲಿನಾ ಮುಚೋವಾರನ್ನು ಮುಖಾಮುಖಿಯಾಗಲಿದ್ದಾರೆ.

ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿ ಬೇಟೆಯಲ್ಲಿರುವ ಸ್ವಿಯಾಟೆಕ್ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಬ್ರೆಝಿಲ್ ಆಟಗಾರ್ತಿ ಬೀಟ್ರಿಝ್‌ರನ್ನು 6-2, 7-6(7) ಸೆಟ್‌ಗಳ ಅಂತರದಿಂದ ಮಣಿಸಿದರು.

ಹಾಲಿ ಚಾಂಪಿಯನ್ ಸ್ವಿಯಾಟೆಕ್ 2007ರ ನಂತರ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ಆಟಗಾರ್ತಿ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. 2007ರಲ್ಲಿ ಜಸ್ಟಿನ್ ಹೆನಿನ್ ಈ ಸಾಧನೆ ಮಾಡಿದ್ದರು.

 22ರ ಹರೆಯದ ಪೋಲ್ಯಾಂಡ್ ಆಟಗಾರ್ತಿ ಸ್ವಿಯಾಟೆಕ್ ಶನಿವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೇಯಾಂಕರಹಿತ ಕರೊಲಿನಾ ಮುಚೋವಾರನ್ನು ಎದುರಿಸಲಿದ್ದಾರೆ.

ಸ್ವಿಯಾಟೆಕ್ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಫ್ರೆಂಚ್ ಓಪನ್‌ನಲ್ಲಿ ಫೈನಲ್ ತಲುಪಿದ ಯುವ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 1990ರಲ್ಲಿ ಮೊನಿಕಾ ಸೆಲೆಸ್ ಈ ಸಾಧನೆ ಮಾಡಿದ್ದರು.

ವಿಶ್ವದ ನಂ.2ನೇ ಆಟಗಾರ್ತಿ ಅರ್ಯನಾ ಸಬಲೆಂಕಾ ಟೂರ್ನಿಯಿಂದ ನಿರ್ಗಮಿಸಿದ ಕಾರಣ ಕಳೆದ ವರ್ಷ ಹಾಗೂ 2020ರಲ್ಲಿ ಸುಝೆನ್ ಲೆಂಗ್ಲೆನ್ ಕಪ್ ಎತ್ತಿ ಹಿಡಿದಿದ್ದ ಸ್ವಿಯಾಟೆಕ್ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಮತ್ತೆ ವಶಪಡಿಸಿಕೊಳ್ಳುವ ಸಾಧ್ಯತೆಯಿದೆ. ಸತತ ಗಾಯದ ಸಮಸ್ಯೆ ಹಾಗೂ 10 ತಿಂಗಳ ಕಾಲ ಡೋಪಿಂಗ್ ನಿಷೇಧ ಎದುರಿಸಿದ್ದ 14ನೇ ಶ್ರೇಯಾಂಕದ ಬೀಟ್ರಿಝ್ ಸತತ 4 ಮೂರು ಸೆಟ್‌ಗಳ ಪಂದ್ಯಗಳನ್ನು ಆಡಿ ಸೆಮಿ ಫೈನಲ್‌ಗೆತಲುಪಿದ್ದರು. ‘‘ಇದು ನಿಜವಾಗಿಯೂ ಅದ್ಭುತ. ಇಂತಹ ದೀರ್ಘ ಟೂರ್ನಮೆಂಟ್ ಆಡುವುದು ನಿಜವಾಗಿಯೂ ಕಷ್ಟಕರ. ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರತೀ ವರ್ಷ ಇಲ್ಲಿ ಉತ್ತಮ ಫಲಿತಾಂಶ ಸಿಗುತ್ತಿದೆ. ಶನಿವಾರದ ಫೈನಲ್ ಪಂದ್ಯಕ್ಕಾಗಿ ಕಾತರದಿಂದಿದ್ದೇನೆ ಎಂದು ಸ್ವಿಯಾಟೆಕ್ ಹೇಳಿದ್ದಾರೆ.

ಬೀಟ್ರಿಝ್ 1968ರ ನಂತರ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ ಮೊದಲ ಬ್ರೆಝಿಲ್ ಆಟಗಾರ್ತಿಯಾಗಿದ್ದಾರೆ. 7 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಬ್ಯುನೊ 55 ವರ್ಷಗಳ ಹಿಂದೆ ಈ ದಾಖಲೆ ನಿರ್ಮಿಸಿದ್ದರು.

Similar News