ವೈದ್ಯರಿಗಾಗಿ ಕಾಯುವ ಗೋಳು

Update: 2023-06-09 19:30 GMT

ಮಾನ್ಯರೇ

ಇತ್ತೀಚೆಗೆ ಒಂದು ಕ್ಲಿನಿಕ್‌ಗೆ ಹೋಗಿದ್ದೆ. ಈ ಮೊದಲು ಅಲ್ಲಿನ ಜನದಟ್ಟಣೆ ನೋಡಿ ಅನುಭವಿಸಿದ್ದರಿಂದ ಮುಂಚಿತವಾಗಿ ಫೋನ್ ಮುಖಾಂತರ ಟೋಕನ್ ನಂಬರ್ ಕೇಳಿ ಪಡೆದುಕೊಂಡಿದ್ದೆ.
ನಿಗದಿತ ಸಮಯ ಬೆಳಗ್ಗೆ ಹನ್ನೊಂದು ಗಂಟೆಗೆ ಹೋಗುವಾಗ ಕ್ಲಿನಿಕ್ ತುಂಬಿಕೊಂಡಿತ್ತು. ಕುಳಿತುಕೊಳ್ಳಲೂ ಜಾಗವಿರಲಿಲ್ಲ. ಬಂದವರೆಲ್ಲ ವೈದ್ಯರ ಆಗಮನವನ್ನು ಆತುರದಿಂದ ಕಾಯುತ್ತಿದ್ದರು. ಗಂಟೆ ಹನ್ನೊಂದು ಕಳೆದರೂ ವೈದ್ಯರು ಬಂದಿರಲಿಲ್ಲ. ಹೇಗೂ ಹನ್ನೊಂದು ವರೆಗೆ ವೈದ್ಯರ ಆಗಮನವಾಯಿತು. ನನ್ನ ಸರದಿಯನ್ನು ಕಾಯುತ್ತಾ ಹನ್ನೆರಡು ಕಳೆಯಿತು.
 ರೋಗಿಗಳು ಎಡೆಬಿಡದೆ ಬರುತ್ತಲೇ ಇದ್ದರು. ಕುಳಿತು ಕೊಳ್ಳಲೂ ಹೆಚ್ಚು ಜಾಗವಿಲ್ಲದ್ದರಿಂದ ಹೆಚ್ಚಿನವರು ನಿಂತೇ ಕಾಯಬೇಕಾಗಿತ್ತು. ಹತ್ತಿರದಲ್ಲೇ ನಿಂತುಕೊಂಡಿದ್ದ ವೃದ್ಧ ಮಹಿಳೆಯನ್ನು ''ನಿಮ್ಮ ನಂಬರ್ ಎಷ್ಟಮ್ಮಾ?'' ಎಂದು ಕೇಳಿದೆ ''ತೊಂಬತ್ತೈದು'' ಅಂದರು.
ನನ್ನದೇ 17 ನಂಬರ್, ಇವರಿನ್ನು ಎಷ್ಟು ಹೊತ್ತು ಕಾಯಬೇಕೋ..ಎಂದು ಯೋಚಿಸುವ ಮಧ್ಯೆ 50+ ವಯಸ್ಸಾದಂತೆ ಕಾಣುವ ಒಬ್ಬರು ಬಂದು ''ನನಗೆ ಜೋರಾಗಿ ತಲೆ ತಿರುಗುತ್ತಾ ಇದೆ'' ಅಂದಾಗ ''ನಿಮ್ಮ ನಂಬರ್ 96. ಈಗ ಏಳು ನಂಬರ್ ಅಷ್ಟೇ ಹೋಯಿತು ಕಾಯಬೇಕು'' ಅನ್ನುವ ಉತ್ತರ ಕ್ಲಿನಿಕ್‌ನಲ್ಲಿದ್ದವರ ಬಾಯಲ್ಲಿ ಬಂತು.
ಈ ಮಾತು ಕೇಳಿ ತುಂಬಾ ನೋವಾಯಿತು. ಏನಿದು ಇಲ್ಲಿನ ವ್ಯವಸ್ಥೆ... ತುರ್ತು ಚಿಕಿತ್ಸೆ ಅಗತ್ಯವಿದ್ದವರಿಗೆ ಮೊದಲ ಪ್ರಾಶಸ್ತ್ಯ ಕೊಡಬೇಕಲ್ಲವೇ? ತಮ್ಮ ಕ್ಲಿನಿಕ್ ಸದಾ ತುಂಬಿಕೊಂಡಂತೆ ಕಾಣಿಸಬೇಕೆಂದು ಬಯಸುವ ಕಮರ್ಶಿಯಲ್ ಮೈಂಡ್ ವೈದ್ಯ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯೇ ಇಲ್ಲವೇ??
 

Similar News