ಇದು ಪಕ್ಷದ ಆಂತರಿಕ ವಿಷಯ: ಸಚಿನ್ ಪೈಲಟ್‌ ಅವರೊಂದಿಗಿನ ಮನಸ್ತಾಪದ ಬಗ್ಗೆ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯೆ

Update: 2023-06-10 11:58 GMT

ಹೊಸದಿಲ್ಲಿ: ರಾಜಸ್ಥಾನ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಿದ್ದು, ಅದಕ್ಕೂ ಮುನ್ನ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಪಕ್ಷ ಹೆಣಗಾಡುತ್ತಿರುವಾಗಲೇ, ಹಲವಾರು ತಿಂಗಳಿನಿಂದ ತನ್ನ ಪ್ರತಿಸ್ಪರ್ಧಿ ಸಚಿನ್ ಪೈಲಟ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಇದು ಪಕ್ಷದ ಆಂತರಿಕ ವಿಷಯ ಎಂದು ಸ್ಪಷ್ಟನೆ ನೀಡಿದ್ದಾರೆ.

NDTV ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅಶೋಕ್ ಗೆಹ್ಲೋಟ್, "ಇತ್ತೀಚೆಗೆ ದಿಲ್ಲಿಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ‌.ಸಿ.ವೇಣುಗೋಪಾಲ್ ಹಾಗೂ ಸುಖ್ಜಿಂದರ್ ಸಿಂಗ್ ಉಸ್ತುವಾರಿಯಲ್ಲಿ ನಾವಿಬ್ಬರೂ ಪರಸ್ಪರ ಮಾತುಕತೆ ನಡೆಸಿದ್ದೇವೆ" ಎಂದು ಹೇಳಿದ್ದಾರೆ.

ವಿಷಯಕ್ಕೆ ತೆರೆ ಎಳೆಯಿರಿ ಎಂದು ವಿನಂತಿಸಿಕೊಂಡಿರುವ ಗೆಹ್ಲೋಟ್, "ಅದರ ಬಗ್ಗೆ ನಾನೀಗ ಮಾತನಾಡಲು ಇಷ್ಟಪಡುವುದಿಲ್ಲ. ನಾವು ಈ ಕುರಿತು ಮಾತನಾಡಲು ಕುಳಿತು, ನಾನೇನಾದರೂ ಹೇಳಿದರೆ ಅದರಿಂದ ಅಪಾರ್ಥವಾಗುವ ಸಾಧ್ಯತೆ ಇದೆ" ಎಂದು ಸಮಜಾಯಿಷಿ ನೀಡಿದ್ದಾರೆ.

ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ವಸುಂಧರಾ ರಾಜೇ ವಿರುದ್ಧ ರಾಜ್ಯ ಸರ್ಕಾರವು ಮೃದುವಾಗಿ ವರ್ತಿಸುತ್ತಿದೆ ಎಂದು ಪದೇ ಪದೇ ಸಚಿನ್ ಪೈಲಟ್ ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೆಹ್ಲೋಟ್, ನಾನೀಗಲೂ ಅವರ ವಿರುದ್ಧ ಕ್ರಮ ಜರುಗಿಸಲು ಸಿದ್ಧ ಎಂದು ಭರವಸೆ ನೀಡಿದ್ದಾರೆ.

"ವಸುಂಧರ ರಾಜೇ ವಿರುದ್ಧ ನಾವು ಮಾಡಿರುವ ಆರೋಪಗಳನ್ನೆಲ್ಲ ನ್ಯಾಯಾಲಯಕ್ಕೆ ಕೊಂಡೊಯ್ಯಲಾಗಿದೆ. ನಾವು ಕೈಬಿಟ್ಟಿರುವ ಪ್ರಕರಣದ ಬಗ್ಗೆ ಯಾವುದೇ ಸಾಮಾನ್ಯ ವ್ಯಕ್ತಿ ಬೊಟ್ಟು ಮಾಡಿದರೂ ನಾನು ಅದರ ವಿರುದ್ಧ ಕ್ರಮ ಜರುಗಿಸುತ್ತೇನೆ" ಎಂದೂ ಹೇಳಿದ್ದಾರೆ.

ಕಳೆದ ವಾರ ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕತ್ವದೆದುರು ನಾಲ್ಕು ಗಂಟೆಗಳ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿನ್ ಪೈಲಟ್ ಅವರೊಂದಿಗಿನ ಫೋಟೋ ವೈರಲ್ ಆಗಿತ್ತು. ಇದರಿಂದ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯದೆ ಹೋದರೂ ಅವರಿಬ್ಬರೂ ತಮ್ಮ ಒಗ್ಗಟ್ಟು ಪ್ರದರ್ಶಿಸಲು ಪ್ರಯತ್ನಿಸಿದ್ದರು.

ತಮ್ಮ ಪ್ರತಿಸ್ಪರ್ಧಿ ಸಚಿನ್ ಪೈಲಟ್‌ರೊಂದಿಗೆ ತಾನು ಕೆಲಸ ಮಾಡಲು ಸಿದ್ಧ ಎಂದು ಹೇಳಿಕೆ ನೀಡಿದ್ದ ಗೆಹ್ಲೋಟ್, ನಾಯಕರು ಸಹನೆಯಿಂದ ವರ್ತಿಸಬೇಕು ಹಾಗೂ ಸೇವೆ ಸಲ್ಲಿಸುವ ತಮ್ಮ ಅವಕಾಶಕ್ಕಾಗಿ ಕಾಯಬೇಕು ಎಂದು ಹೇಳುವ ಮೂಲಕ ಸಚಿನ್ ಪೈಲಟ್‌ರೊಂದಿಗಿನ ತಮ್ಮ ಸಂಘರ್ಷ ಇನ್ನೂ ಉಳಿದಿದೆ ಮತ್ತು ಮುಂದುವರಿಯಲಿದೆ ಎಂಬುದರ ಸೂಚನೆಯನ್ನೂ ನೀಡಿದ್ದರು.

Similar News