ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಮಾನವೀಯತೆಯ ಗುಣ ರೂಢಿಸಿಕೊಳ್ಳುವುದು ಅಗತ್ಯ: ಸಯ್ಯದ್ ಬ್ಯಾರಿ
ಬೀದರ್ ಶಾಹೀನ್ ಸಂಸ್ಥೆಯೊಂದಿಗೆ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಹಭಾಗಿತ್ವಕ್ಕೆ ಚಾಲನೆ
ಕುಂದಾಪುರ, ಜೂ.10: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ನೈತಿಕತೆ, ಪರೋಪಕಾರಿ ಭಾವನೆ ಹಾಗೂ ಮಾನವೀಯತೆಯ ಗುಣವನ್ನು ರೂಢಿಸಿಕೊಳ್ಳಬೇಕಾಗಿದೆ. ಕೇವಲ ಹಣ ಮಾಡುವುದು ಜೀವನದ ಗುರಿಯಾಗಬಾರದು ಎಂದು ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯು ಕೇಶನ್ ಟ್ರಸ್ಟ್ ನ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿದ್ದಾರೆ.
ಕುಂದಾಪುರ ಕೋಡಿ ಬೀಚ್ ರಸ್ತೆಯಲ್ಲಿರುವ ಬ್ಯಾರೀಸ್ ಸಮೂಹ ಸಂಸ್ಥೆಗಳ ಆವರಣದಲ್ಲಿ ಶನಿವಾರ ನಡೆದ ಕೋಡಿ ಪಿಯು ಕಾಲೇಜು ಹಾಗು ಬೀದರಿನ ಪ್ರತಿಷ್ಟಿತ ಶಾಹೀನ್ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಲಾಂಛನ ಅನಾವರಣಗೊಳಿಸಿ ಮಾತನಾಡುತ್ತಿದ್ದರು. 117 ವರ್ಷಗಳನ್ನು ಪೂರೈಸಿರುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಒಂದು ಮಗು ಉತ್ತೀರ್ಣವಾಗಿ ಯಶಸ್ಸಾದರೆ ಆ ಇಡೀ ಕುಟುಂಬ ಯಶಸ್ಸು ಕಾಣುತ್ತದೆ. ಈ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ, ಮಕ್ಕಳು ವಿದ್ಯಾವಂತರಾಗಬೇಕು ಎಂಬ ಇಚ್ಚಾಶಕ್ತಿಯೊಂದಿಗೆ ಬ್ಯಾರೀಸ್ ಸಂಸ್ಥೆ ಸಾರ್ಥಕ ಮನೋಭಾವನೆಯೊಂದಿಗೆ ಮುನ್ನಡೆಯುತ್ತಿದೆ. ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ಕೂಡ ಇದೇ ರೀತಿಯ ಚಿಂತನೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಎರಡೂ ಶಿಕ್ಷಣ ಸಂಸ್ಥೆಗಳು ಈಗ ಸಹಯೋಗಗೊಂಡಿದ್ದು ಸಮಾಜಕ್ಕೆ ಅತ್ಯುತ್ತಮ ಶೈಕ್ಷಣಿಕ ಕೊಡುಗೆ ನೀಡುವ ಗುರಿ ನಮಗಿದೆ ಎಂದು ಸಯ್ಯದ್ ಬ್ಯಾರಿ ಹೇಳಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ 60 ಶಾಖೆಗಳಿದ್ದು, ಆನ್‌ಲೈನ್ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ. ಈವರೆಗೆ ಶಾಹೀನ್ ಸಂಸ್ಥೆಯಿಂದ 3 ಸಾವಿರಕ್ಕೂ ಅಧಿಕ ವೈದ್ಯರು, 10 ಸಾವಿರ ಇಂಜಿನಿಯರ್ ಗಳು ಸಿದ್ಧವಾಗಿದ್ದು ಬಹುತೇಕರು ಗ್ರಾಮೀಣ ಪ್ರದೇಶದವರು ಎಂದು ಸಯ್ಯದ್ ಬ್ಯಾರಿ ಹೇಳಿದರು.
ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ವಿದ್ಯೆ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡಲು ಕ್ರಮ ವಹಿಸಲಾಗುತ್ತದೆ. ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಕಲಿತುಕೊಳ್ಳುವುದು ಪ್ರಸ್ತುತ ಅಗತ್ಯವಾಗಿದ್ದು ತಿಂಗಳಿನಲ್ಲಿ 3-4 ದಿನ ಮಾರ್ಷಲ್ ಆರ್ಟ್ಸ್ ಕಲಿಕೆಗೆ ಒತ್ತು ನೀಡಲಾಗುತ್ತದೆ. ಕಲಿಕೆ ಜೊತೆಗೆ ಎಲ್ಲಾ ಉತ್ತಮ ವಿಚಾರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಾಧನೆ ಮಾಡಬೇಕು. ಎಲ್ಲಾ ಕೆಲಸಗಳಲ್ಲಿ ಏಕಾಗ್ರತೆ ಹಾಗೂ ಗುಣಮಟ್ಟ ಇರಬೇಕು. ಸಮಾಜದಲ್ಲಿ ಇತರೊಂದಿಗೆ ಬೆರೆಯುವ ಗುಣನಡತೆ ಹಾಗೂ ಸತ್ಯ- ನ್ಯಾಯದ ಮೇಲೆ ಗೌರವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಯ್ಯದ್ ಬ್ಯಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಂದೆ-ತಾಯಿಯ ಪ್ರಾರ್ಥನೆಯು ಮಕ್ಕಳಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಇದಕ್ಕೆ ಆದ್ಯತೆ ನೀಡಬೇಕು. ಮೊಬೈಲ್ ಬಳಕೆ ಅಗತ್ಯ ಒಳ್ಳೆ ಕೆಲಸಗಳಿಗೆ ಮಾತ್ರ ಸೀಮಿತವಾಗಿರಲಿ. ನಮ್ಮ ಮನಸ್ಸು ಶುದ್ಧವಾಗಿದ್ದಾಗಲೇ ಎಲ್ಲವೂ ಸರಿಯಾಗಿರುತ್ತದೆ. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಆಡಳಿತ ಮಂಡಳಿ ಸಮನ್ವಯತೆ ಯಿಂದ ಕೆಲಸ ಮಾಡಿದಾಗ ಸುವ್ಯವಸ್ಥೆ ಸಾಧ್ಯ ಎಂದು ಸಯ್ಯದ್ ಬ್ಯಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೀದರ್ ಶಾಹೀನ್ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ.ಅಬ್ದುಲ್ ಖಾದೀರ್ ಮಾತನಾಡಿ, ಕೋಡಿ ಬ್ಯಾರೀಸ್ ಸಂಸ್ಥೆಯಲ್ಲಿ ಎಲ್ಲ ರೀತಿಯ ಶೈಕ್ಷಣಿಕ ವ್ಯವಸ್ಥೆಗಳಿವೆ. ಇಂತಹ ಭಾಗದಲ್ಲಿ ಈ ರೀತಿಯ ಉತ್ತಮ ಸಂಸ್ಥೆಗಳಿದ್ದರೆ ಸಾಕಷ್ಟು ಬದಲಾವಣೆ ಹಾಗೂ ಪರಿವರ್ತನೆಗಳಾಗುತ್ತವೆ. ಇದರ ಸ್ಥಾಪಕರ ಸಂಕಲ್ಪದಿಂದ ಈ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಕ್ರಾಂತಿ ಆಗಿದೆ ಎಂದರು.
ಇದೊಂದು ಸೌಹಾರ್ದತೆಯ ತಾಣವಾಗಿದೆ. ಇಲ್ಲಿ ಹಿಂದು ಮುಸ್ಲಿಮರು ಎಲ್ಲರೂ ಒಟ್ಟಾಗಿ ಅನೋನ್ಯವಾಗಿ ಬದುಕುತ್ತಿದ್ದಾರೆ. ದೇಶ ಇಂದು ಸಾಕಷ್ಟು ಪ್ರಗತಿ ಸಾಧಿಸಿದೆ. ಕೈಗಾರೀಕರಣ, ಮೂಲಭೂತ ಸೌಕರ್ಯಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇವುಗಳ ಮಧ್ಯೆ ನಮಗೆ ಇಂದು ಪ್ರೀತಿ ಕೂಡ ಅತೀ ಅಗತ್ಯವಾಗಿದೆ ಎಂದು ಡಾ. ಖದೀರ್ ಹೇಳಿದರು.
ಶಿಕ್ಷಣದಿಂದ ವಿದ್ಯಾರ್ಥಿಗಳ ಬದುಕು ಪರಿವರ್ತನೆ ಸಾಧ್ಯ. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವುದು ಕೂಡ ಮುಖ್ಯ. ಇದಕ್ಕೆ ಬೇಕಾದ ಎಲ್ಲ ರೀತಿಯ ಪ್ರೋತ್ಸಾಹವನ್ನು ನಮ್ಮ ಶಾಹೀನ್ ಸಂಸ್ಥೆ ನೀಡಲಿದೆ. ಶೈಕ್ಷಣಿಕವಾಗಿ, ಆನ್‌ಲೈನ್ ಮೂಲಕ ಶಿಕ್ಷಕರ ಬೋಧನೆ ಹಾಗೂ ಸ್ಪಧಾರ್ತ್ಮಕ ಪರೀಕ್ಷೆಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಡಾ. ಖದೀರ್ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹಿಮಾನ್ ಮಾತನಾಡಿ, ಶಿಕ್ಷಣದ ವಿಚಾರದಲ್ಲಿ ಸಮಾನ ಮನಸ್ಕರಾಗಿರುವ ಬ್ಯಾರೀಸ್ ಸಂಸ್ಥೆ ಹಾಗೂ ಶಾಹೀನ್ ಸಂಸ್ಥೆಗಳ ಸಮ್ಮಿಲನವಾಗಿದೆ. ಈ ಬಾಂಧವ್ಯ ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಸೆದು ಜಾತಿ, ಮತ ಬೇಧವಿಲ್ಲದೆ ಗುಣಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕ ಕ್ರಾಂತಿ ತರಲಿದೆ ಎಂದರು.
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಶಮೀರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ಶೆಟ್ಟಿ, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಶೆಟ್ಟಿ, ಹಾಜಿ ಕೆ.ಮೊಯ್ದಿನ್ ಬ್ಯಾರಿ ಸ್ಮಾರಕ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯ ಜಟ್ಟಪ್ಪ, ಬ್ಯಾರೀಸ್ ಸಂಸ್ಥೆಯ ಸಂಯೋಜಕ ಆಕಾಶ್, ಸಲಹೆಗಾರ ಅಭಿಷೇಕ್, ವಿಶ್ವಸ್ಥ ಮಂಡಳಿ ಸದಸ್ಯ ಆಸೀಫ್, ಹಾಜಿ ಅಬು ಶೇಕ್, ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಿಇಒ ತೌಸೀಫ್ ಮೊದಲಾದವರು ಉಪಸ್ಥಿತರಿದ್ದರು.
ಗಣಿತಶಾಸ್ತ್ರ ಉಪನ್ಯಾಸಕಿ ರಜನಿ ಸ್ವಾಗತಿಸಿದರು. ಉಪನ್ಯಾಸಕ ಪಲ್ಲವಿ ಪರಿಚಯಿಸಿ, ಪವಿತ್ರಾ ವಂದಿಸಿದರು. ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
"ಈ ಭೂಮಿಯ ಮೇಲೆ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ. ಮುಂದಿನ ಪೀಳಿಗೆಗೆ ಸಾಕಷ್ಟು ವೈದ್ಯರನ್ನು ಕೊಟ್ಟ ನಮ್ಮ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು ಪ್ರತಿಷ್ಟಿತ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗಗೊಳ್ಳುತ್ತಿರುವುದು ಅತೀವ ಸಂತಸ ತಂದಿದೆ. ಇನ್ನು ಮುಂದೆ ಎರಡೂ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸಂಪನ್ಮೂಲ ಹಂಚಿಕೊಳ್ಳುವುದರೊಂದಿಗೆ ಉಭಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣ ನಾವಾಗುತ್ತೇವೆ"
-ಡಾ.ಅಬ್ದುಲ್ ಖಾದೀರ್, ಸ್ಥಾಪಕಾಧ್ಯಕ್ಷರು, ಶಾಹೀನ್ ಗ್ರೂಪ್ ಬೀದರ್