ಕೊರಗ ಯುವಕರ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲು: ಪಡುಬಿದ್ರಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ನ್ಯಾಯ ಒದಗಿಸದಿದ್ದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟದ ಎಚ್ಚರಿಕೆ

Update: 2023-06-10 12:50 GMT

ಪಡುಬಿದ್ರಿ, ಜೂ.10: ಇನ್ನಾ ಗ್ರಾಮದ ಕೊರಗ ಸಮುದಾಯದ ಯುವಕರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಸುಳ್ಳು ‘ದರೋಡೆ’ ಪ್ರಕರಣವನ್ನು ದಾಖಲಿಸಿರುವುದನ್ನು ವಿರೋಧಿಸಿ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಪೊಲೀಸರು ಗೌರವ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಡುಬಿದ್ರಿ ಮಾರ್ಕೆಟ್‌ನಲ್ಲಿ ಪಡುಬಿದ್ರಿ ಪೊಲೀಸ್ ಸ್ಟೇಷನ್ ಚಲೋ ಮತ್ತು ಪ್ರತಿಭಟನಾ ಸಭೆ ಶನಿವಾರ ನಡೆದವು.

ದ.ಕ. ಮತ್ತು ಉಡುಪಿ ಜಿಲ್ಲಾ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಕರೆ ನೀಡಿದ್ದ ಪ್ರತಿಭಟನಾ ಸಭೆಗೂ ಮುನ್ನ ಪಡುಬಿದ್ರಿಯ ಕಾರ್ಕಳ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಪಡುಬಿದ್ರಿಯ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.  ಈ ವೇಳೆ ಪೊಲೀಸರ ಹಾಗೂ  ತಪ್ಪಿತಸ್ಥನ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಪ್ರಕರಣದಲ್ಲಿ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಮುಂದಾಗುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. 

ಮರು ತನಿಖೆಗೆ ಒಳಪಡಿಸಬೇಕು: ಇಡೀ ಪ್ರಕರಣದಲ್ಲಿ ಮೂಲ ತಪ್ಪಿತಸ್ಥನಾಗಿರುವ ಆರೋಪಿ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಲಕ್ಷ್ಮೀನಾರಾಯಣ ವಿರುದ್ಧ ದಲಿತ ಮಹಿಳೆಯ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ, ಕರಾವಳಿ ಕರ್ನಾಟಕದ ಮೂಲ ನಿವಾಸಿ ಕೊರಗ ಸಮುದಾಯದವರು ಇಂದೂ ತುಳಿತಕ್ಕೊಳಗಾಗುತ್ತಿದ್ದಾರೆ. ಅಳಿವಿನ ಅಂಚಿನಲ್ಲಿರುವ, ಜನಸಂಖ್ಯೆ ಕುಸಿಯುತ್ತಿರುವ ಪ್ರಿಮಿಟಿವ್ ಟ್ರೈಬ್ ಎಂದು ಕೇಂದ್ರ ಸರಕಾರ ಗುರುತಿಸಿ ಸರಕಾರದ ಪ್ರತಿಯೊಂದು ಇಲಾಖೆಗಳೂ ಈ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂಬ ನಿಯಮಾವಳಿ ಇದೆ. ಇವರನ್ನು ಸಂವಿಧಾನಾತ್ಮಕವಾಗಿ ರಕ್ಷಿಸಿಕೊಳ್ಳಬೇಕಾದ ಪೊಲೀಸರೂ ಕೂಡಾ ಈ ಪ್ರಕರಣದಲ್ಲಿ ಏಕಪಕ್ಷೀಯ ವಾಗಿ ವರ್ತಿಸಿದ್ದಾರೆ ಎಂದು ದೂರಿದರು.

ಆರೋಪಿಯನ್ನು ಕೂಡಲೇ ಬಂಧಿಸಿ: ಪ್ರಕರಣದ ಆರೋಪಿ ಸ್ಥಳೀಯ ಪರಿಶಿಷ್ಟ ಯುವಕರಿಗೆ ‘ರೆಡ್ ಹ್ಯಾಂಡ್’ ಆಗಿ ಸಿಕ್ಕುಬಿದ್ದಿದ್ದ. ತಪ್ಪೆಸಗಿದ ಈ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲು ತೆರಳಿದ ಮಹಿಳೆಗೆ ಠಾಣೆಯಲ್ಲೇ ಅಪಮಾನವನ್ನೂ ಮಾಡಲಾಯಿತು. ಲೈಂಗಿಕ ಕಿರುಕುಳದ ದೂರನ್ನೂ ಪೊಲೀಸರು ಸ್ವೀಕರಿಸಲಿಲ್ಲ. ಹೀಗಾಗಿ ಇಡೀ ಪ್ರಕರಣದ ಮರು ತನಿಖೆ, ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿ ತಪ್ಪಿತಸ್ಥ ಲಕ್ಷ್ಮೀನಾರಾಯಣನ ಬಂಧನವಾಗಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಪ್ಪ ಕೊಂಚಾಡಿ ಪೊಲೀಸ್ ಅಧೀಕ್ಷಕರನ್ನು ಒತ್ತಾಯಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮತ್ತೊಬ್ಬ ರಾಜ್ಯ ಸಹಸಂಚಾಲಕ ಡಾ.ಎಸ್.ವೈ.ಗುರುಶಾಂತ್, ಸಿಐಟಿಯು ದ.ಕ.ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದಲಿತ ಮುಖಂಡ ಜಯನ್ ಮಲ್ಪೆ ಹಾಗೂ ಬಿ.ಕೆ.ಇಮ್ತಿಯಾಝ್ ಮಾತನಾಡಿದರು. 

ವಿವಿಧ ಸಂಘಟನೆಗಳ ನಾಯಕರಾದ ಶ್ರೀಧರ ನಾಡಾ, ಯಾದವ ಶೆಟ್ಟಿ,  ಸಂತೋಷ್ ಬಜಾಲ್, ಕವಿರಾಜ್ ಕಾಂಚನ್, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ತಿಮ್ಮಯ್ಯ ಕೊಂಚಾಡಿ, ರಂಗ ಕೊರಗ, ಗಣೇಶ್ ಆಳ್ವ, ಕೃಷ್ಣ ಇನ್ನ, ಕರಿಯ ಕೆ., ಶೇಖರ್, ಪ್ರಮೀಳಾ ಶಕ್ತಿನಗರ, ಜೆಸಿಂತಾ ಮತ್ತಿತರರು ಉಪಸ್ಥಿತರಿದ್ದರು.

ಸುರಿಯುವ ಮಳೆಯಲ್ಲೂ ಪ್ರತಿಭಟನೆ: ಪ್ರತಿಭಟನೆಯ ವೇಳೆ ಜೋರಾಗಿ ಮಳೆ ಸುರಿದರೂ ಅಲ್ಲಿಂದ ಯಾರೂ ಕದಲದೆ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಛತ್ರಿಯನ್ನು ಹಿಡಿದುಕೊಂಡು ನಾಯಕರು ಭಾಷಣ ಮುಂದುವರಿಸುವ ಮೂಲಕ ಗಮನಸೆಳೆದರು.

ನಾಗರಿಕ ಸಮಾಜಕ್ಕೆ ಮಾಡಿದ ಅನ್ಯಾಯ

ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಬೇಕಾದ ಪೊಲೀಸರು ಸಂತ್ರಸ್ಥರ ಪರವಾಗಿ ನಿಲ್ಲಬೇಕಾಗಿತ್ತು. ಆದರೆ ಆರೋಪಿಗಳ ಪರವಾಗಿ ನಿಲ್ಲುವ ಮೂಲಕ ನಾಗರಿಕ ಸಮಾಜಕ್ಕೆ ಘೋರ ಅನ್ಯಾಯ ಎಸಗಿದ್ದಾರೆ. ಇನ್ನಾದ ಕಾಂಜರಕಟ್ಟೆಯ ಕೊರಗ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಇದೊಂದು ಗಂಭೀರ ಪ್ರಕರಣವಾಗಿದೆ. ಆರೋಪಿಯ ವಿರುದ್ಧ ಹಾಗೂ ಸರಿಯಾಗಿ ತನಿಖೆ ನಡೆಸದೆ ಏಕಪಕ್ಷೀಯವಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಭೆ ಒತ್ತಾಯಿಸಿತು.

ಈ ಪ್ರಕರಣದಲ್ಲಿ ಸಂತ್ರಸ್ತ ಕೊರಗ ಸಮುದಾಯಕ್ಕೆ ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಹೋರಾಟ ವನ್ನು ರಾಜ್ಯಮಟ್ಟದಲ್ಲೂ ನಡೆಸಲಾಗುವುದು. ಉಡುಪಿ ಜಿಲ್ಲೆಗೆ ಆಗಮಿಸುವ ಸಚಿವರ ವಿರುದ್ಧವೂ ಕಪ್ಪು ಬಾವುಟ ಪ್ರದರ್ಶನ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪೊಲೀಸರಿಗೆ ಮನವಿ ಸಲ್ಲಿಕೆ

ಸಭೆಯ ಬಳಿಕ ನೆರೆದಿದ್ದ ವಿವಿಧ ಸಂಘಟನೆಗಳ ನಾಯಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಅವರಿಗೆ ಈ ಕುರಿತಾದ ಮನವಿ ಪತ್ರವನ್ನು ಹಸ್ತಾಂತರಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ತಪ್ಪಿತಸ್ಥ ಪೊಲೀಸರ ಮೇಲೆಯೂ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಕಾನೂನು ರೀತಿಯಲ್ಲಿ ಅಧಿಕಾರಿಗಳಿಂದ ತಪ್ಪಾಗಿದ್ದಲ್ಲಿ ಕಾನೂನುಬದ್ಧವಾಗಿ  ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಲು ಇಲಾಖೆ ಸಿದ್ಧವಿದೆ ಎಂದು ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ  ಪ್ರತಿಭಟನಕಾರರಿಗೆ ಭರವಸೆ ನೀಡಿದರು.

ಈ ಸಂದರ್ಭ ಕಾಪು ಇನ್‌ಸ್ಪೆಕ್ಟರ್ ಪೂವಯ್ಯ, ಪಡುಬಿದ್ರಿ ಎಸ್‌ಐ ಪುರುಷೋತ್ತಮ, ಶಿರ್ವ ಎಸ್‌ಐ ರಾಘವೇಂದ್ರ ಇದ್ದರು.

Similar News