ಭತ್ತಕ್ಕೆ ಪ್ರೋತ್ಸಾಹಧನ, ತೆಂಗಿಗೆ ಬೆಂಬಲ ಬೆಲೆ ಘೋಷಿಸಲು ಆಗ್ರಹ
ಕುಂದಾಪುರ, ಜೂ.10: ಕರಾವಳಿ ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಭತ್ತವನ್ನು ಬೆಳೆಯಲಾಗುತ್ತಿದೆ ಯಾದರೂ, ಈ ಬಾರಿ ಅತೀ ಬರಗಾಲದ ಪರಿಸ್ಥಿತಿಯ ಕಾರಣ ನೇಜಿ ತಯಾರಿಸಲು ಇನ್ನೂ ಸಾಧ್ಯವಾಗಿಲ್ಲ. ನೀರಿನ ಅಭಾವದಿಂದ ಭತ್ತದ ನಾಟಿ ಕೂಡ ತುಂಬಾ ವಿಳಂಬ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿ ಹೇಳಿದೆ.
ಕುಂದಾಪುರ ತಾಲೂಕು ಉಪಾಧ್ಯಕ್ಷ ಅನಂತ ಪದ್ಮನಾಭ ಉಡುಪರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಸಭೆ ಈ ಬಾರಿಯ ಮಳೆ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿತು.
ಕಾಡುಪ್ರಾಣಿಗಳ ಉಪಟಳ, ಮಣ್ಣಿನ ಸವಕಳಿಯಿಂದ ಫಲವತ್ತತೆಯ ಕೊರತೆ ಮೊದಲಾದ ಸಮಸ್ಯೆಯಿಂದ ರೈತರು ಭತ್ತದ ಬೆಳೆಯಿಂದ ವಂಚಿತರಾಗುತ್ತಿದ್ದಾರೆ. ಹಡಿಲು ಭೂಮಿ ಕೃಷಿಗೆ ಎಷ್ಟೇ ಪ್ರಯತ್ನಿಸಿದರೂ ವಿವಿಧ ಸಮಸ್ಯೆಗಳಿಂದಾಗಿ ರೈತರು ಅದರಿಂದ ಹಿಂದೆ ಸರಿಯುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ರಾಜ್ಯಸರಕಾರ ಮಳೆಯಾಶ್ರಿತವಾಗಿ ಬೆಳೆಯುವ ಸಿರಿಧಾನ್ಯಗಳಿಗೆ ನೀಡುವಂತೆ ಪ್ರತಿ ಎಕರೆಗೆ ಹತ್ತು ಸಾವಿರ ರೂ. ಪ್ರೋತ್ಸಾಹಧನವನ್ನು ಭತ್ತದ ಬೆಳೆಗಾರರಿಗೂ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡಲು ಸಭೆ ತೀರ್ಮಾನಿಸಿತು.
ಇದೇ ಸಂದರ್ಭದಲ್ಲಿ ತೆಂಗಿನಕಾಯಿಯ ಬೆಲೆ ಅನೇಕ ವರ್ಷಗಳಿಗೆ ಹೋಲಿಸಿದರೆ ಪಾತಾಳಕ್ಕೆ ಕುಸಿದಿದೆ. ಬರಗಾಲ ಪರಿಸ್ಥಿತಿಯಿಂದ ಮುಂದಿನ ಫಸಲೂ ಕೂಡ ನಾಶವಾಗಿದೆ. ಬಿಳಿನೊಣ, ಕಾಂಡ ಕೂರಕ, ರೈನೊ ಸಾರಸ್ ದುಂಬಿ ಮೊದಲಾದ ಕೀಟಬಾಧೆಗಳ ಜೊತೆಗೆ ಮಂಗ, ಹಂದಿಗಳ ಕಾಟದಿಂದ ಬೆಳೆದ ಕಾಯಿ ಮನೆಗೆ ಬರುತ್ತಿಲ್ಲ. ತೆಂಗಿನ ಬೆಳೆಯನ್ನೆ ಅವಲಂಬಿಸಿರುವ ರೈತರು ಕಂಗಲಾಗಿದ್ದಾರೆ. ಆದ್ದರಿಂದ ಸರಕಾರ ತೆಂಗಿನ ಕಾಯಿಗೂ ಕನಿಷ್ಟ 40ರೂ ಬೆಲೆ ಘೋಷಿಸಿ, ಖರೀದಿಗೆ ಕೇಂದ್ರಗಳನ್ನು ತೆರೆದು ರೈತರ ಜೊತೆ ನಿಲ್ಲಬೇಕಾಗಿದೆ ಎಂದೂ ಸರಕಾರವನ್ನು ಆಗ್ರಹಿಸಲು ಸಂಘ ತೀರ್ಮಾನಿಸಿತು.
ಸಭೆಯಲ್ಲಿ ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರ ರೈತರಿಗೆ ಬಿಡುಗಡೆ ಆಗದಿರುವ ಬಗ್ಗೆ ಹಾಗೂ ಮುಂದಿನ ವರ್ಷಕ್ಕೆ ಜಿಲ್ಲಾಡಳಿತ ವಿಮಾ ಪಾವತಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲು ತೀರ್ಮಾನಿಸಲಾುತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ತಾಲೂಕು ಉಪಾಧ್ಯಕ್ಷ ಮಹಾಬಲ ಬಾಯರಿ, ಕೋಶಾಧಿಕಾರಿ ಸುಧಾಕರ ನಾಯಕ್, ಪದಾಧಿಕಾರಿಗಳಾದ ಗಣಪಯ್ಯ ಗಾಣಿಗ, ನಾಗಯ್ಯ ಶೆಟ್ಟಿ, ನಾರಾಯಣ ಶೆಟ್ಟಿ, ಭೋಜರಾಜ ಶೆಟ್ಟಿ, ರಾಮಚಂದ್ರ ಭಟ್ ಮೊದಲಾ ದವರು ಉಪಸ್ಥಿತರಿದ್ದರು.